ನವದೆಹಲಿ, ಸೆ.03(Daijiworld News/SS): ಕೆಲ ತಿಂಗಳ ಹಿಂದೆ ಸೌದಿಯ ಅತ್ಯುತ್ತಮ ನಾಗರೀಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ನರೇಂದ್ರ ಮೋದಿ, ಇದೀಗ ಮತ್ತೆ ತಮ್ಮ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರತಿಷ್ಠಿತ ಬಿಲ್ ಮತ್ತು ಮಿಲಿಂದಾ ಗೇಟ್ಸ್ ಫೌಂಡೇಷನ್ನಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛಭಾರತ ಅಭಿಯಾನಕ್ಕೆ ಪ್ರಶಸ್ತಿ ಲಭ್ಯವಾಗಿದೆ. ಅಮೆರಿಕ ಮೂಲದ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಈ ಪ್ರಶಸ್ತಿ ನೀಡುತ್ತಿದ್ದು, ಈ ತಿಂಗಳ ಅಂತ್ಯದಲ್ಲಿ ಅವರು ಅಮೆರಿಕಾ ಪ್ರವಾಸ ಕೈಗೊಳ್ಳುವ ವೇಳೆ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಈ ಕುರಿತು ಟ್ಟೀಟ್ ಮಾಡಿರುವ ಪಿಎಂಒ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರ "ಪರಿಶ್ರಮಶಾಲಿ ಮತ್ತು ನವೀನ" ಯೋಜನೆಗಳಿಗೆ ಜಗತ್ತಿನಾದ್ಯಂತ ಮೆಚ್ಚುಗೆಗಳು ಹರಿದು ಬರುತ್ತಿವೆ ಎಂದಿದ್ದಾರೆ. ಮತ್ತೊಂದು ಪ್ರಶಸ್ತಿಯ ಮೂಲಕ ಇದು ಭಾರತೀಯರೆಲ್ಲರಿಗೂ ಮತ್ತೊಮ್ಮೆ ಹೆಮ್ಮೆಯ ಕ್ಷಣ ಎಂದು ಟ್ಟೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಎನ್ಡಿಎ ಆಡಳಿತದ ಮೊದಲ ಅವಧಿಯಲ್ಲಿ ರಾಷ್ಟ್ರವನ್ನು ಬಯಲು ಶೌಚ ಮುಕ್ತವನ್ನಾಗಿಸುವ ಉದ್ದೇಶದಿಂದ 2014ರಲ್ಲಿ ಸ್ವಚ್ಛಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. 2019ರ ವೇಳೆಗೆ 9 ಕೋಟಿ ಶೌಚಗೃಹಗಳನ್ನು ನಿರ್ಮಿಸಿ, ದೇಶವನ್ನು ಬಯಲು ಶೌಚ ಮುಕ್ತವನ್ನಾಗಿಸುವ ಗುರಿ ಹಾಕಿಕೊಂಡು, ಅ.2ರ ಗಾಂಧಿ ಜಯಂತಿಯಂದು ಅಭಿಯಾನ ಆರಂಭಿಸಿದ್ದರು.