ನವದೆಹಲಿ, ,ಜೂ. 18 (DaijiworldNews/AK): ಜೂನ್ 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಗೆ ಮುನ್ನ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಜೂನ್ 22 ರವರೆಗೆ ಭಾರತದಲ್ಲಿ ಟೆಲಿಗ್ರಾಂ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ತೇಜಸ್ ಕರಿಯಾ ಅವರು, ನೀಟ್ ಆಕಾಂಕ್ಷಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂಬ ಕಾರಣಕ್ಕಾಗಿ 150 ಮಿಲಿಯನ್ ಬಳಕೆದಾರರ ಹಕ್ಕುಗಳನ್ನು ನಿರ್ಬಂಧಿಸಬಹುದೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಇದೇ ಸಮಯದಲ್ಲಿ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಟೆಲಿಗ್ರಾಮ್ ನೈಜ-ಸಮಯದ ಮೇಲ್ವಿಚಾರಣೆಯಂತಹ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆಯೇ ಎಂದು ನ್ಯಾಯಾಧೀಶರು ಕೇಳಿದರು.
ಟೆಲಿಗ್ರಾಂನ ಪರವಾಗಿ ಹಿರಿಯ ವಕೀಲ ಧ್ರುವ ಮೆಹ್ತಾ ವಾದ ಮಂಡಿಸಿದರು. ಕೇಂದ್ರವು ಆಕ್ಷೇಪಾರ್ಹ ಪೋಸ್ಟ್ಗಳನ್ನು ತೆಗೆದುಹಾಕಲು ಪ್ರಯತ್ನಿಸಬಹುದು. ಇಡೀ ಆ್ಯಪ್ ಮೇಲೆ ನಿಷೇಧ ಹೇರಲು ಸಾಧ್ಯವಿಲ್ಲ. ಇದರಿಂದ ಬಳಕೆದಾರರ ವಾಕ್ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತದೆ ಎಂದರು.