ನವದೆಹಲಿ, ಜೂ. 19 (DaijiworldNews/AA): ಜೂನ್ 21 ರಂದು ದೇಶಾದ್ಯಂತ ನಡೆಯಲಿರುವ ನೀಟ್-ಯುಜಿ ಮರು ಪರೀಕ್ಷೆ ಹಿನ್ನೆಲೆ ಟೆಲಿಗ್ರಾಮ್ಅನ್ನು ತಾತ್ಕಾಲಿಕವಾಗಿ ನಿರ್ಬಂಧ ಹೇರಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿತ್ತು. ಇದೀಗ ಈ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.

ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಜೂನ್ 22 ರವರೆಗೆ ಟೆಲಿಗ್ರಾಮ್ ಆ್ಯಪ್ ಅನ್ನು ದೇಶದಲ್ಲಿ ನಿರ್ಬಂಧಿಸಿರುವ ಕೇಂದ್ರದ ಆದೇಶವನ್ನು ಪ್ರಶ್ನಿಸಿ ಟೆಲಿಗ್ರಾಮ್ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಹೈಕೋರ್ಟ್ ಟೆಲಿಗ್ರಾಮ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ಪರೀಕ್ಷೆಯ ಸಮಯದಲ್ಲಿ ಯಾವುದೇ ರೀತಿಯ ಪರೀಕ್ಷಾ ಸಾಮಗ್ರಿಗಳ ಸಂಭಾವ್ಯ ಸೋರಿಕೆ ಅಥವಾ ಸಂದೇಶ ವೇದಿಕೆಯ ದುರುಪಯೋಗವನ್ನು ತಡೆಗಟ್ಟಲು ಈ ತಾತ್ಕಾಲಿಕ ನಿಷೇಧದ ಕ್ರಮವು ಸಂಪೂರ್ಣವಾಗಿ ಸಮರ್ಥನೀಯವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಇಂತಹ ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯ ಎಂಬ ಕೇಂದ್ರ ಸರ್ಕಾರದ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿದೆ.