ನವದೆಹಲಿ, ಜೂ. 19 (DaijiworldNews/AA): ನೀಟ್ ಪರೀಕ್ಷಾ ಅಕ್ರಮಗಳು ಮತ್ತು ಮರುಪರೀಕ್ಷೆಗಳ ವಿವಾದಗಳ ನಡುವೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮನವಿ ಮಾಡಿಕೊಂಡಿದ್ದಾರೆ.

ಜೂನ್ 20ರಂದು ಜಂತರ್ ಮಂತರ್ನಲ್ಲಿ ನಡೆಯಲಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ಮುನ್ನ ಪ್ರಧಾನಿ ಮೋದಿಗೆ ಅವರು ಈ ಪತ್ರ ಬರೆದಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು. ಜೊತೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
"ದೇಶದ ಭವಿಷ್ಯವಾದ ಯುವ ವಿದ್ಯಾರ್ಥಿಗಳ ಜೀವ ಮತ್ತು ಮಾನಸಿಕ ಆರೋಗ್ಯಕ್ಕೆ ಗಂಭೀರ ಅಪಾಯ ಎದುರಾಗಿದೆ. ಈ ಬಗ್ಗೆ ನಿಮ್ಮ ಗಮನ ಸೆಳೆಯಲು ಭಾರವಾದ ಮನಸ್ಸಿನಿಂದ ಈ ಪತ್ರ ಬರೆಯುತ್ತಿದ್ದೇನೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಇತ್ತೀಚಿನ ವಾರಗಳಲ್ಲಿ 11 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಅವರು, ಕಳೆದ 48 ಗಂಟೆಗಳಲ್ಲೇ ಐವರು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ. ಪರೀಕ್ಷೆಗಳ ಮರುನಿರ್ವಹಣೆ ಕುರಿತ ಅನಿಶ್ಚಿತತೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ವಿವಾದಗಳಿಂದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ" ಎಂದು ಹೇಳಿದ್ದಾರೆ.
"ಮಕ್ಕಳ ಶಿಕ್ಷಣಕ್ಕಾಗಿ ದೊಡ್ಡ ಪ್ರಮಾಣದ ಸಾಲ ಮಾಡಿದ್ದ ಅನೇಕ ಕುಟುಂಬಗಳು, ಈಗ ತಮ್ಮ ಮಕ್ಕಳನ್ನು ಕಳೆದುಕೊಂಡು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಇಂತಹ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ಘೋಷಿಸಬೇಕು" ಎಂದು ಒತ್ತಾಯಿಸಿದ್ದಾರೆ.