ಬೆಂಗಳೂರು, ಸೆ.03(Daijiworld News/SS): ರಾಜಕೀಯವಾಗಿ ಏನೇ ಬಂದರೂ ನಾನು ಅದನ್ನು ಎದುರಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯದ ಕಚೇರಿಯಿಂದ ಮೂರನೇ ದಿನದ ವಿಚಾರಣೆ ಪೂರ್ಣಗೊಳಿಸಿ ಹೊರಬಂದ ಡಿ.ಕೆ.ಶಿವಕುಮಾರ್ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಅಶ್ವತ್ಥ್ ನಾರಾಯಣ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಈಗಾಗಲೇ ನಾನು ಅಶ್ವತ್ಥ್ ನಾರಾಯಣ ಅವರ ಹೇಳಿಕೆಯನ್ನು ಗಮನಿಸಿದ್ದೇನೆ, ಈಗ ಅವರಿಗೆ ಉತ್ತಮ ಅವಕಾಶ ಸಿಕ್ಕಿದೆ. ಅದರಲ್ಲಿ ಅವರು ಯಶಸ್ವಿಯಾಗಲಿ. ರಾಜಕೀಯ ಬಿಟ್ಟು ವ್ಯಾಪಾರಿಯಾಗಲಿ ಎಂದು ಸಲಹೆ ನೀಡಿದ್ದಾರೆ. ಅವರು ಬಹಳ ದೊಡ್ಡವರು, ಅವರ ಸಲಹೆ ಸ್ವೀಕರಿಸುತ್ತೇನೆಂದು ಡಿಕೆಶಿ ಲೇವಡಿ ಮಾಡಿದ್ದಾರೆ.
ತಂದೆ ಹಾಗೂ ಹಿರಿಯರಿಗೆ ಪೂಜೆ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂಬ ನೋವಿನಿಂದ ಕಣ್ಣೀರು ಹಾಕಿದ್ದೇನೆ ಹೊರತು ಅನುಕಂಪ ಗಿಟ್ಟಿಸಿಕೊಳ್ಳಬೇಕಾದ ಅನಿವಾರ್ಯತೆ ನನಗಿಲ್ಲ. ರಾಜಕೀಯವಾಗಿ ಏನೇ ಬಂದರೂ ಎದುರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವುದೇ ವಿಷಯದಲ್ಲೂ ಅನುಕಂಪ ಗಿಟ್ಟಿಸಿಕೊಳ್ಳುವ ಅನಿವಾರ್ಯತೆ ನನಗಿಲ್ಲ. ರಾಜಕಾರಣ ಮಾಡಲೇಬೇಕೆಂದು ಬಂದವನು ನಾನು ಎಂದು ಈಗಾಗಲೇ ಹೇಳಿದ್ದೇನೆ. ರಾಜಕೀಯವಾಗಿ ಏನೇ ಬಂದರೂ ಎದುರಿಸುತ್ತೇನೆ. ನಾನು ಯಾವುದಕ್ಕೂ ಹೆದರುವ ಮಗನಲ್ಲ ಎಂದು ಹೇಳಿದ್ದಾರೆ.