ನವದೆಹಲಿ, ಜೂ. 20 (DaijiworldNews/TA): ಕ್ಲಾಸಿಕ್ ಬೈಕ್ಗಳ ಮೂಲಕ ಜನಪ್ರಿಯತೆ ಗಳಿಸಿರುವ ರಾಯಲ್ ಎನ್ಫೀಲ್ಡ್ ಇದೀಗ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೂ ಅಧಿಕೃತವಾಗಿ ಪ್ರವೇಶಿಸಿದೆ. ಕಂಪನಿಯ ಹೊಸ ಉಪ-ಬ್ರಾಂಡ್ ‘ಫ್ಲೈಯಿಂಗ್ ಫ್ಲಿಯಾ’ ಅಡಿಯಲ್ಲಿ ಪರಿಚಯಿಸಿರುವ ಫ್ಲೈಯಿಂಗ್ ಫ್ಲಿಯಾ C6 ಎಲೆಕ್ಟ್ರಿಕ್ ಬೈಕ್ನ ಮೊದಲ ಬ್ಯಾಚ್ ವಿತರಣೆಯನ್ನು ಆರಂಭಿಸಲಾಗಿದೆ.

ವಿಶಿಷ್ಟ ರೆಟ್ರೋ-ಕ್ಲಾಸಿಕ್ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಬೈಕ್, ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್ಸೈಕಲ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಟಿಸುವ ನಿರೀಕ್ಷೆಯಿದೆ. ಫ್ಲೈಯಿಂಗ್ ಫ್ಲಿಯಾ C6 ಬೈಕ್ 3.91 kWh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 154 ಕಿಲೋಮೀಟರ್ಗಳವರೆಗೆ ಸಂಚರಿಸಬಹುದು ಎಂದು ಕಂಪನಿ ತಿಳಿಸಿದೆ. ಬ್ಯಾಟರಿಯು 20ರಿಂದ 80 ಪ್ರತಿಶತ ಚಾರ್ಜ್ ಆಗಲು ಕೇವಲ 65 ನಿಮಿಷಗಳು ಬೇಕಾಗುತ್ತದೆ. ಪೂರ್ಣ ಚಾರ್ಜ್ಗೆ ಸುಮಾರು 2 ಗಂಟೆ 16 ನಿಮಿಷಗಳ ಸಮಯ ಸಾಕಾಗುತ್ತದೆ.
ಐತಿಹಾಸಿಕ ಹೆಸರಿನ ಮರುಜನ್ಮ : ‘ಫ್ಲೈಯಿಂಗ್ ಫ್ಲಿಯಾ’ ಎಂಬ ಹೆಸರು ರಾಯಲ್ ಎನ್ಫೀಲ್ಡ್ನ ಐತಿಹಾಸಿಕ ಮಾದರಿಯಿಂದ ಪ್ರೇರಿತವಾಗಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸೇನಾ ಬಳಕೆಗಾಗಿ ತಯಾರಿಸಲಾದ 125 ಸಿಸಿ ಹಗುರ ತೂಕದ ಬೈಕ್ಗೆ ಇದೇ ಹೆಸರು ಇತ್ತು. ಇದೀಗ ಅದೇ ಹೆಸರಿನಲ್ಲಿ ಕಂಪನಿ ತನ್ನ ಎಲೆಕ್ಟ್ರಿಕ್ ವಾಹನ ಶ್ರೇಣಿಯನ್ನು ಪರಿಚಯಿಸಿದೆ.
ಆಧುನಿಕ ಫೀಚರ್ಗಳೊಂದಿಗೆ ರೆಟ್ರೋ ಲುಕ್ : ಬೈಕ್ನಲ್ಲಿ ದುಂಡಗಿನ ರೆಟ್ರೋ ಹೆಡ್ಲೈಟ್, TFT ಟಚ್ಸ್ಕ್ರೀನ್ ಡಿಸ್ಪ್ಲೇ, 19 ಇಂಚಿನ ಅಲಾಯ್ ಚಕ್ರಗಳು ಹಾಗೂ ಕೀಲೆಸ್ ಸ್ಟಾರ್ಟ್ ವ್ಯವಸ್ಥೆಯನ್ನು ನೀಡಲಾಗಿದೆ. ಪಿನ್ ಮೂಲಕ ಬೈಕ್ ಅನ್ನು ಆನ್ ಮತ್ತು ಆಫ್ ಮಾಡಬಹುದಾಗಿದ್ದು, ಮೊಬೈಲ್ ಆ್ಯಪ್ ಮೂಲಕವೂ ಹಲವು ಸೌಲಭ್ಯಗಳನ್ನು ನಿಯಂತ್ರಿಸಬಹುದಾಗಿದೆ.
ಪವರ್ಫುಲ್ ಮೋಟಾರ್ : ಫ್ಲೈಯಿಂಗ್ ಫ್ಲಿಯಾ C6ನಲ್ಲಿ ಅಳವಡಿಸಿರುವ PMSM ಎಲೆಕ್ಟ್ರಿಕ್ ಮೋಟಾರ್ 15.4 ಕಿಲೋವ್ಯಾಟ್ ಪವರ್ ಹಾಗೂ 60 Nm ಟಾರ್ಕ್ ಉತ್ಪಾದಿಸುತ್ತದೆ. ಬೆಲ್ಟ್ ಡ್ರೈವ್ ಸಿಸ್ಟಮ್ ಮತ್ತು ರಿಯರ್ ಮೊನೋಶಾಕ್ ಸಸ್ಪೆನ್ಷನ್ ಸವಾರಿಗೆ ಹೆಚ್ಚು ಆರಾಮದಾಯಕ ಅನುಭವ ನೀಡಲಿವೆ.
ಬೆಲೆ ಎಷ್ಟು? : ರಾಯಲ್ ಎನ್ಫೀಲ್ಡ್ ಫ್ಲೈಯಿಂಗ್ ಫ್ಲಿಯಾ C6 ಎಲೆಕ್ಟ್ರಿಕ್ ಬೈಕ್ನ ಬೆಲೆಯನ್ನು ಸುಮಾರು ರೂ. 2.79 ಲಕ್ಷ (ಎಕ್ಸ್ಶೋರೂಂ) ಎಂದು ನಿಗದಿಪಡಿಸಲಾಗಿದೆ. ರಾಯಲ್ ಎನ್ಫೀಲ್ಡ್ನ ಈ ಹೊಸ ಎಲೆಕ್ಟ್ರಿಕ್ ಬೈಕ್, ಪರಂಪರೆಯ ವಿನ್ಯಾಸವನ್ನು ಉಳಿಸಿಕೊಂಡು ಭವಿಷ್ಯದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ವಾಹನ ಪ್ರಿಯರ ಗಮನ ಸೆಳೆದಿದೆ.