ನವದೆಹಲಿ, ಜೂ. 20 (DaijiworldNews/AA): ಟಿಕೆಟ್ರಹಿತ ಪ್ರಯಾಣ ಸೇರಿದಂತೆ ಹಲವು ಉಲ್ಲಂಘನೆಗಳಿಗೆ ದುಪ್ಪಟ್ಟು ದಂಡ ವಿಧಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಈ ಹೊಸ ನಿಯಮ ಜುಲೈ 1ರಿಂದ ಜಾರಿಯಾಗುತ್ತಿದೆ.

ಇದುವರೆಗೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ಟಿಕೆಟ್ ದರದ ಜೊತೆಗೆ 250 ರೂ. ದಂಡ ವಿಧಿಸಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ ಟಿಕೆಟ್ ದರದ ಜೊತೆಗೆ 500 ರೂ. ದಂಡ ಪಾವತಿಸಬೇಕಾಗುತ್ತದೆ. ಈ ಮೂಲಕ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುವವರ ವಿರುದ್ಧ ಇಲಾಖೆ ಸಮರ ಸಾರಿದೆ.
ಸುಮಾರು 13 ವರ್ಷಗಳ ಬಳಿಕ ರೈಲ್ವೆ ಇಲಾಖೆ ದಂಡದ ಮೊತ್ತವನ್ನು ಪರಿಷ್ಕರಿಸಿದೆ. ಪ್ರಯಾಣಿಕರಲ್ಲಿ ಶಿಸ್ತು ಮೂಡಿಸುವುದು ಮತ್ತು ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗುತ್ತಿದೆ.
ಮಹಿಳಾ ಕೋಚ್ಗೆ ಅನಧಿಕೃತವಾಗಿ ಪ್ರವೇಶಿಸುವ ಪುರುಷ ಪ್ರಯಾಣಿಕರಿಗೆ 2,500 ರೂ. ವರೆಗೆ ದಂಡ, ರೈಲ್ವೆ ಆವರಣದಲ್ಲಿ ಪರವಾನಗಿ ಇಲ್ಲದೇ ವ್ಯಾಪಾರ ನಡೆಸುವುದು ಅಥವಾ ಭಿಕ್ಷೆ ಬೇಡುವುದಕ್ಕೂ 2,000 ರೂ. ದಂಡ ವಿಧಿಸಲಾಗುತ್ತದೆ. ನಿಷೇಧಿತ ವಸ್ತುಗಳನ್ನ ಸಾಗಿಸುವವರಿಗೆ 10,000 ರೂ. ವರೆಗೆ ದಂಡ ವಿಧಿಸುವ ಅವಕಾಶವಿದೆ. ರೈಲು ಅಥವಾ ರೈಲ್ವೆ ನಿಲ್ದಾಣಕ್ಕೆ ಅನಧಿಕೃತವಾಗಿ ಪ್ರವೇಶಿಸಿದವರಿಗೆ 500 ರೂ. ದಂಡ ವಿಧಿಸಲಾಗುತ್ತದೆ.
ಕುಡಿದು ಗಲಾಟೆ ಮಾಡಿದರೆ 24 ಗಂಟೆಗಳವರೆಗೆ ಜೈಲು ಶಿಕ್ಷೆ, 1,000 ರೂ. ದಂಡ ಅಥವಾ ಸಮುದಾಯ ಸೇವೆ ವಿಧಿಸಬಹುದು. ಅಶ್ಲೀಲ ವರ್ತನೆ ತೋರಿದರೆ ಅಥವಾ ಸಹ ಪ್ರಯಾಣಿಕರಿಗೆ ಕಿರುಕುಳ ನೀಡಿದರೆ 1,000 ರೂ. ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.
ಪ್ರಯಾಣಿಕರ ಸುರಕ್ಷತೆ ಮತ್ತು ವ್ಯವಸ್ಥಿತ ಪ್ರಯಾಣಕ್ಕಾಗಿ ಈ ಕ್ರಮಗಳನ್ನು ಜಾರಿಗೆ ತರಲಾಗಿದೆ. ದಂಡ ಪಾವತಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯವಿದ್ದರೆ ಜೈಲು ಶಿಕ್ಷೆಯನ್ನೂ ಎದುರಿಸಬೇಕಾಗಬಹುದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.