ಬೆಂಗಳೂರು, ಜೂ. 20 (DaijiworldNews/AK): ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಸ್ವಪಕ್ಷೀಯ ಶಾಸಕರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನೀವು ಕಾಂಗ್ರೆಸ್ಗೆ ಹೋಗೋದಾದರೆ ಧೈರ್ಯವಾಗಿ ಈಗಲೇ ಹೋಗಿ. ಈ ರೀತಿ ನಡೆದುಕೊಳ್ಳಬೇಡಿ ಎಂದು ಕಿಡಿಕಾರಿದರು.

ಅವರ ನಿವಾಸದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಮ್ಮ ಪಕ್ಷದಲ್ಲಿ ಭವಿಷ್ಯ ಇಲ್ಲ ಅಂತ ನಿಮ್ಮ ಮನಸ್ಸಿನಲ್ಲಿದ್ದರೆ, ನಾನು ತೊಂದರೆ ಕೊಡಲ್ಲ ಎಂದಿದ್ದೇನೆ. ಕಾಂಗ್ರೆಸ್ಗೆ ಹೋಗಬೇಕು ಎಂದರೆ ಧೈರ್ಯವಾಗಿ ನನಗೆ ಹೇಳಿ ಹೋಗಿ. ಆದರೆ ಈ ರೀತಿ ಮಾಡ್ಬೇಡಿ ಅನ್ನೋದನ್ನ ನೇರವಾಗಿ ಹೇಳಿದ್ದೇನೆ ಎಂದು ತಿಳಿಸಿದರು.
ಅಡ್ಡ ಮತದಾನ ಮಾಡಿದವರ ಪತ್ತೆಗೆ ಬಿಜೆಪಿ ಮೂರು ಜನ ಸದಸ್ಯರ ತಂಡ ಮಾಡಿದೆ. ಸಿ.ಟಿ. ರವಿ ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ದೆಹಲಿಗೆ ಹೋದಾಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡುತ್ತೇನೆ. ಇವೆಲ್ಲದರ ಮಾಹಿತಿ ಅವರಿಗೆ ಕೊಡ್ತೇನೆ ಎಂದರು.
ನಮ್ಮ ಶಾಸಕರು ಅಂತಿಮ ನಿರ್ಣಯ ಮಾಡುವ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಇದನ್ನು ಇನ್ನೂ ಎಳೆದುಕೊಂಡು ಹೋಗೋ ಅವಶ್ಯಕತೆ ಇಲ್ಲ. ನನ್ನ ಗುರಿ 2028ರ ಚುನಾವಣೆ ಕಡೆ ಇದೆ. ಈ ರಾಜ್ಯದಲ್ಲಿ ನಿಜವಾದ ಜನಪರ, ಜನತೆಯ ನಿರೀಕ್ಷೆಗಳಿಗೆ ಕೆಲಸ ಮಾಡುವ ಸರ್ಕಾರ ತರಬೇಕು. ಮುಖ್ಯಮಂತ್ರಿ ಸ್ಥಾನ ಅವೆಲ್ಲ ಆಮೇಲೆ. ಮೊದಲು ಇಲ್ಲಿ ಕೆಟ್ಟ ಸರ್ಕಾರ ಹೋಗಬೇಕು ಎಂದರು.