ಬೆಂಗಳೂರು, ಜೂ. 20 (DaijiworldNews/AA): ರಾಜ್ಯದ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು 'ಪ್ರಜಾ ಸೇವೆ' ಎನ್ನುವ ಹೊಸ ಇಲಾಖೆ ಸ್ಥಾಪನೆ ಮಾಡಲಾಗಿದೆ. ಈ ಇಲಾಖೆಗೆ ಪ್ರತ್ಯೇಕ ಸಚಿವರು, ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಇಂದು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಎರಡನೇ ಸಚಿವ ಸಂಪುಟದಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಸಮಸ್ಯೆ ಇರುವಾಗ ನಾವು ಏನಾದರೂ ನ್ಯಾಯ ಕೊಡೋಕೆ ಸಾಧ್ಯನಾ ಅನ್ನೋದು ಮುಖ್ಯ. ನಾವು ಪ್ರಜಾ ಸೇವೆ ಇಲಾಖೆ ಖಾತೆ ಸೃಷ್ಟಿಸಿ, ಹೊಸ ಮಿನಿಸ್ಟರ್ ನಿಯೋಜಿಸುತ್ತಿದ್ದೇವೆ. ಐಎಎಸ್ ಅಧಿಕಾರಿ ಒಬ್ಬರು ಈ ಇಲಾಖೆಯಲ್ಲಿ ಇರುತ್ತಾರೆ. ಯಾವುದೇ ಸಚಿವರಿಗೆ ಅರ್ಜಿ ಕೊಟ್ಟರೂ ಈ ಇಲಾಖೆಗೆ ತರುತ್ತೇವೆ" ಎಂದು ಹೇಳಿದ್ದಾರೆ.
"ಈ ಇಲಾಖೆ ಪೋಸ್ಟಮ್ಯಾನ್ ಕೆಲಸ ಮಾಡುವುದಿಲ್ಲ. ಜನರ ಸಮಸ್ಯೆಗಳಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತದೆ. ಸಚಿವರು ಎಲ್ಲಾ 224 ಕ್ಷೇತ್ರಗಳಿಗೂ ಹೋಗಿ ಶಾಸಕರ ಜತೆ ಸಭೆ ನಡೆಸಿ ಜನರ ಅಹವಾಲುಗಳನ್ನು ಆಲಿಸಿ ನ್ಯಾಯ ದೊರಕಿಸುವ ಕೆಲಸ ಮಾಡಲಿದ್ದಾರೆ. ವಾರಕ್ಕೊಮ್ಮೆ ಕಡ್ಡಾಯವಾಗಿ ಶಾಸಕರ ಜತೆಗೂಡಿ ಜನಸ್ಪಂದನ ಸಭೆ ನಡೆಸಿ ಅಲ್ಲಿನ ಅಭಿಪ್ರಾಯಗಳನ್ನು ನಮಗೆ ತಲುಪಿಸುತ್ತಾರೆ. ಅದಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ" ಎಂದರು.
"ಈ ಇಲಾಖೆಯಡಿ 224 ಕ್ಷೇತ್ರಗಳಲ್ಲಿ ಎಲ್ಲಾ ಸಚಿವರು ಸಭೆ ನಡೆಸಬೇಕು. 224 ಕ್ಷೇತ್ರಗಳಿಗೂ ಜಿಲ್ಲಾ ಉಸ್ತುವಾರಿ ಸಚಿವರು ಹೋಗಬೇಕಾಗುತ್ತೆ. ವಾರಕ್ಕೆ ಒಂದು ದಿನ ಸಚಿವರು ಹೋಗಬೇಕು, ಜನಸ್ಪಂದನ ಸಭೆಗಳನ್ನ ಮಾಡಬೇಕು, ಸ್ಥಳೀಯ ಶಾಸಕರನ್ನ ಪರಿಗಣಿಸಬೇಕು. ಸ್ಥಳೀಯ ಶಾಸಕರ ಜೊತೆ ವಾರಕ್ಕೊಮ್ಮೆ ಸಚಿವರು ಸಭೆ ನಡೆಸಬೇಕು. ಈ ಮೂಲಕ ಅಲ್ಲಿಂದ ಜನರ ಸಮಸ್ಯೆಗಳನ್ನ ಇಲಾಖೆಯಲ್ಲಿ ಇತ್ಯರ್ಥ ಪಡಿಸಲಾಗುವುದು. ಎಲ್ಲಾ ಸಚಿವರು ಈ ಇಲಾಖೆ ಒಳಗೆ ಬರ್ತಾರೆ" ಎಂದು ವಿವರಿಸಿದರು.