ನವದೆಹಲಿ, ಸೆ.03(Daijiworld News/SS): ದೇಶದ ಆರ್ಥಿಕ ಸ್ಥಿತಿಗತಿಯಲ್ಲಿ ಹಲವಾರು ಕಳವಳಕಾರಿ ವಿದ್ಯಮಾನಗಳು ಕಳೆದ ಹಲವಾರು ತಿಂಗಳಿಂದ ಕಂಡುಬರುತ್ತಿದ್ದು, ಈ ಹಿನ್ನಲೆ ಮೋದಿ ಸರ್ಕಾರದ ವಿರುದ್ಧ ಟೀಕೆಗಳು ಕೇಳಿಬರುತ್ತಿದೆ.
ಇದೀಗ ದೇಶದ ಆರ್ಥಿಕ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಇದು ‘ಐತಿಹಾಸಿಕ ಆರ್ಥಿಕ ಕುಸಿತ’ ಎಂದು ಬಣ್ಣಿಸಿದ್ದಾರೆ. ನೂರು ಬಾರಿ ಸುಳ್ಳು ಹೇಳೋದ್ರಿಂದ ಅದು ಸತ್ಯವಾಗೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಸರ್ಕಾರ ಐತಿಹಾಸಿಕ ಆರ್ಥಿಕ ಕುಸಿತವನ್ನು ಒಪ್ಪಿಕೊಳ್ಳಬೇಕು. ಜೊತೆಗೆ ಸ್ಥಿತಿ ಸುಧಾರಣೆಗೆ ಯತ್ನಿಸಬೇಕು ಎಂದು ಒತ್ತಾಯಿಸಿದ ಅವರು, ಆರ್ಥಿಕ ಸ್ಥಿತಿಗತಿಯ ಸವಾಲನ್ನು ಎದುರಿಸುವ ಬದಲು ಸರ್ಕಾರ ‘ಹೆಡ್ ಲೈನ್ ನಿರ್ವಹಣೆ’ ಮಾಡುತ್ತಿದೆ ಎಂದು ಪ್ರಿಯಾಂಕಾ ಟೀಕಿಸಿದ್ದಾರೆ.
ದೇಶದಲ್ಲಿ ಉಂಟಾಗಿರುವ ಆರ್ಥಿಕ ಹಿನ್ನಡೆಯಿಂದಾಗಿ ಕೈಗಾರಿಕಾ ಕ್ಷೇತ್ರದ ಪ್ರಮುಖ ವಲಯಗಳ ಬೆಳವಣಿಗೆ ತೀರಾ ಕುಸಿದಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶ ತಿಳಿಸಿದೆ. ಆರ್ಥಿಕ ಹಿನ್ನಡೆ ಅಥವಾ ಆರ್ಥಿಕ ಕುಸಿತದಿಂದಾಗಿ ವಿದ್ಯುತ್, ಕಚ್ಚಾ ತೈಲ, ಸಿಮೆಂಟ್ ಸೇರಿದಂತೆ ಪ್ರಮುಖ 8 ಕೈಗಾರಿಕಾ ವಲಯಗಳ ಆರ್ಥಿಕ ಬೆಳವಣಿಗೆ ಪ್ರಮಾಣ ಜುಲೈನಲ್ಲಿ ಶೇ 2.1ಕ್ಕೆ ಕುಸಿದಿದೆ ಎಂದು ತಿಳಿದುಬಂದಿದೆ.