ನವದೆಹಲಿ, ಸೆ 03 (DaijiworldNews/SM): ನಾಲ್ಕು ದಿನಗಳ ಇಡಿ ವಿಚಾರಣೆ ಬಳಿಕ ಇದೀಗ ರಾಜ್ಯ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಬಂಧನವಾಗಿದೆ.
ನೋಟ್ ರದ್ದತಿ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ದಿನಗಳಿಂದ ಡಿ.ಕೆ. ಶಿವಕುಮಾರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ನಿರಂತರ ವಿಚಾರಣೆಯ ಬಳಿಕ ಡಿ. ಕೆ. ಶಿವಕುಮಾರ್ ಅವರನ್ನು ಸೆಪ್ಟೆಂಬರ್ 03ರ ಮಂಗಳವಾರದಂದು ಬಂಧಿಸಲಾಗಿದೆ.
ದೇಶದಲ್ಲಿ ನೋಟು ರದ್ದತಿ ಸಂದರ್ಭದಲ್ಲಿ ಡಿಕೆಶಿಯವರ ದೆಹಲಿಯ ಫ್ಲಾಟ್ ನಲ್ಲಿ 8. 59 ಕೋಟಿ ಹಣ ಸಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರದಿಂದಲೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಇಂದು, ತನಿಖೆಗೆ ಸಹಕರಿಸದಿರುವ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ. ಇಂದು ರಾತ್ರಿ ಅಥವಾ ಬುಧವಾರದಂದು ಡಿಕೆಶಿಯವರನ್ನು ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇನ್ನು ರಾಜ್ಯದ ಪ್ರಭಾವಿ ನಾಯಕನೊಬ್ಬನನ್ನು ಬಂಧಿಸುವ ಮೂಲಕ ಅವರ ಆತ್ಮ ವಿಶ್ವಾಸ ಕುಗ್ಗಿಸುವ ಕೆಲಸವನ್ನು ಇಡಿ ಸಂಸ್ಥೆ ಮಾಡುತ್ತಿದೆ ಎಂದು ಆರೋಪಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಡಿ ಅಧಿಕಾರಿಗಳ ಕಾರು ತಡೆದು ಪ್ರತಿಭಟನೆ ನಡೆಸಿದ ಪ್ರಸಂಗ ಕೂಡ ನಡೆದಿದೆ.