ನವದೆಹಲಿ, ಸೆ.04(Daijiworld News/SS): ಉತ್ತಮ ಆಡಳಿತ ನೀಡಲು ವಿಫಲವಾದ ಕೇಂದ್ರ ಸರ್ಕಾರ ದೇಶದ ಆರ್ಥಿಕ ಸ್ಥಿತಿ ಅಧಃಪತನಕ್ಕಿಳಿದಿರುವುದನ್ನು ಮರೆಮಾಚಲು ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸುವ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ಆರ್ಥಿಕ ಹಿಂಜರಿತದಿಂದ ದೇಶ ಜರ್ಜರಿತವಾಗುತ್ತಿದ್ದು, ಇದನ್ನು ಮರೆಮಾಚಲು ದೇಶದ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿ ಹೈಡ್ರಾಮಾ ಸೃಷ್ಟಿ ಮಾಡಿದೆ ಎಂದು ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲಾ ಅವರು, ಆರ್ಥಿಕ ಹಿಂಜರಿತದಿಂದ ದೇಶದ ಆರ್ಥಿಕತೆ ಕುಸಿಯುತ್ತಿದೆ. ಇಂತಹ ಗಂಭೀರ ವಿಚಾರವನ್ನು ದೇಶದ ಜನರಿಂದ ಮರೆಮಾಚಲು ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರ ಬಂಧನ ಪ್ರಹಸನದ ಹೈಡ್ರಾಮಾ ಮಾಡುತ್ತಿದೆ ಎಂದು ದೂರಿದ್ದಾರೆ.
ಆರ್ಥಿಕ ಹಿಂಜರಿತದಿಂದ ಷೇರುಮಾರುಕಟ್ಟೆ ಕುಸಿದಿದ್ದು, ಹೂಡಿಕೆದಾರರಿಗೆ 2.5 ಲಕ್ಷ ಕೋಟಿ ನಷ್ಟವಾಗಿದೆ. ಇದನ್ನು ಮರೆಮಾಚಲು ಡಿಕೆ ಶಿವಕುಮಾರ್ ಅವರ ಬಂಧನ ಮಾಡಲಾಗಿದೆ. ಬ್ರಿಟೀಷರು ದೇಶದಲ್ಲಿ ಡಿವೈಡ್ ಅಂಡ್ ರೂಲ್ ಆಟದ ಮೂಲಕ ಆಡಳಿತಕ್ಕೆ ಮುಂದಾಗಿದ್ದರೆ, ಮೋದಿ ನೇತೃತ್ವದ ಬಿಜೆಪಿ ಮಿಸ್ ಲೀಡ್ ಮತ್ತು ಮಿಸ್ ರೂಲ್ ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.
ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮವನ್ನು ಪಕ್ಷ ಖಂಡಿಸಿದ್ದು, ಕಾಂಗ್ರೆಸ್ ವಿರುದ್ಧ ಹಗೆತನ ಸಾಧಿಸುವ ಆಡಳಿತಾರೂಢ ಕೇಂದ್ರ ಸರ್ಕಾರದ ತಂತ್ರಗಾರಿಕಾ ಕ್ರಮ ಇದು. ಉತ್ತಮ ಆಡಳಿತ ನೀಡಲು ವಿಫಲವಾದ ಕೇಂದ್ರ ಸರ್ಕಾರ ದೇಶದ ಆರ್ಥಿಕ ಸ್ಥಿತಿ ಅಧಃಪತನಕ್ಕಿಳಿದಿರುವುದನ್ನು ಮರೆಮಾಚಲು ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸುವ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದೆ ಎಂದು ತಿಳಿಸಿದರು.