ಬೆಂಗಳೂರು,ಸೆ 04 (Daijiworld News/RD): ಡಿ ಕೆ ಶಿವಕುಮಾರ್ ಅವರ ಬಂಧನವು ರಾಜಕೀಯ ಪ್ರೇರಿತ ಸೇಡಿನ ಕ್ರಮ. ಕಾಂಗ್ರೆಸ್ ಪಕ್ಷ ಇದನ್ನು ನಾವೆಂದೂ ಕೂಡ ಸಹಿಸುವುದಿಲ್ಲ. ಹಾಗಾಗಿ ಪಕ್ಷದ ವತಿಯಿಂದ ನಾವೆಲ್ಲ ಸೇರಿ ರಾಜಕೀಯವಾಗಿ, ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿ.ಅವರನ್ನು ನಾಲ್ಕನೇ ದಿನವು ವಿಚರಣೆಗೆ ಒಳಪಡಿಸಿ ಅಧಿಕಾರಿಗಳು ದಸ್ತಗಿರಿ ಮಾಡಿದ್ದಾರೆ ಇದು ಕಾನೂನು ಬಾಹಿರ, ಇದು ರಾಜಕೀಯ ಪ್ರೇರಿತ. ಈಗಗಲೇ ಪಕ್ಷದ ಪ್ರಭಾವಿ ನಾಯಕರುಗಳಾದ ಪಿ.ಚಿದಂಬರಂ ಹಾಗೂ ಡಿಕೆಶಿ ಇಬ್ಬರನ್ನು ಬಂಧಿಸಲಾಗಿದ್ದು, ಇದು ರಾಜಕೀಯ ಪ್ರೇರಿತವಾಗಿದೆ, ಇದು ಒಳ್ಳೆಯದಲ್ಲ ಎಂದು ಕಿಡಿಕಾರಿದರು. ಕೈ ಮುಖಂಡರನ್ನ ಕೇಂದ್ರ ಟಾರ್ಗೆಟ್ ಮಾಡುತ್ತಿದ್ದು, ಇದಕ್ಕೆಲ್ಲಾ ನಾವು ಹೆದರಲ್ಲ, ಇವೆಲ್ಲವೂ ಜನರಿಗೆ ಅರ್ಥವಾಗುತ್ತಿದೆ. ಸದ್ಯದಲ್ಲಿಯೇ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಈ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಲಿದೆ ಎಂದರು.
ತಪ್ಪು ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಅದನ್ನು ದಸ್ತಗಿರಿ ಮಾಡುವುದು ಸರಿಯಲ್ಲ. ರಾಜಕೀಯ ದ್ವೇಷದಿಂದ ಈ ರೀತಿ ಮಾಡಿದ್ದಾರೆ. ಸಮನ್ಸ್ ಕೊಟ್ಟು ಅಟೆಂಡ್ ಆಗದೆ ಹೋದರೆ ದಸ್ತಗಿರಿ ಮಾಡಲಿ. ಆದರೆ ಡಿಕೆಶಿ ಅಧಿಕಾರಿಗಳು ಕರೆದಾಗೆಲ್ಲ ಹೋಗಿದ್ದು, ಹಬ್ಬದ ದಿನವೂ ವಿಚಾರಣೆಗೆ ಹಾಜರಾಗಿದ್ದರು. ಪಾಪ ಅವರು ಡಿಕೆಶಿ ಕಣ್ಣೀರು ಹಾಕಿ ಅತ್ತರು, ಎಷ್ಟೊಂದು ಅಮಾನವೀಯ ಇದು ಎಂದರು. ಪ್ರಧಾನಿ ಮೋದಿ ಸೆ 7 ಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ. ಅಂದಾದರೂ ಎಲ್ಲಾ ಮಂತ್ರಿಗಳು ಪ್ರಧಾನಿ ಅವರನ್ನು ಭೇಟಿ ಮಾಡಲಿ, ಜೊತೆಗೆ ನೆರೆ ಪರಿಹಾರವನ್ನು ಕೇಳಲಿ ಎಂದರು.