ಮೈಸೂರು,ಸೆ 04 (Daijiworld News/RD): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಕಷ್ಟು ಬಾರಿ ಕಾರ್ಯಕರ್ತರು ವಿರುದ್ಧ ಹರಿಹಾಯ್ದ ಉದಾಹರಣೆಗಳಿದ್ದು, ಇದೀಗ ತನ್ನ ಪಕ್ಷದ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿ, ಬದಿಗೆ ತಳ್ಳಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ. ಬೆಳಗ್ಗೆ 9 ಗಂಟೆಗೆ ಎಚ್ಎಎಲ್ ವಿಶೇಷ ವಿಮಾನ ನಿಲ್ದಾಣದ ಮೂಲಕ ಮೈಸೂರಿಗೆ ತೆರಳಿದ್ದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ನಂತರ ಪಕ್ಷದ ಕಾರ್ಯಕರ್ತ ರವಿ ಮೇಲೆ ಸಿಟ್ಟುಗೊಂಡು ಆತನ ಕೆನ್ನೆಗೆ ಬಾರಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ರವಿ ಎಂಬುವವರು ಯಾವುದೋ ವ್ಯಕ್ತಿಗೆ ಕರೆ ಮಾಡಿದ್ದರು. ಅದಾದ ನಂತರ ಸಿದ್ದರಾಮಯ್ಯ ಅವರಿಗೆ ಮೊಬೈಲ್ ನೀಡಲು ಮುಂದಾದರು. ಈ ದೂರವಾಣಿ ಸಂಪರ್ಕದಲ್ಲಿರುವವರ ನಿಮ್ಮ ಜೊತೆ ಮಾತನಾಡುವಂತೆ ಹೇಳಿದ್ದಾರೆ ಎಂದು ರವಿ ಸಿದ್ದರಾಮಯ್ಯರವರ ಸಮೀಪ ಬಂದಾಗ, ‘ನಾನು ಮಾತನಾಡುವುದಿಲ್ಲ ಹೋಗ್’ ಎಂದು ಸಿದ್ದರಾಮಯ್ಯ ಗುಡುಗಿ ರವಿ ಕೆನ್ನೆಗೆ ಬಾರಿಸಿ, ಬದಿಗೆ ತಳ್ಳಿದ್ದಾರೆ. ಇದೀಗ ಸಾಮಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.