ಬೆಂಗಳೂರು, ಸೆ.04(Daijiworld News/SS): ಡಿಕೆಶಿ ಈ ಎಲ್ಲ ಸಂಕಷ್ಟದಿಂದ ಶೀಘ್ರವೇ ಪಾರಾಗಿ ಸುರಕ್ಷಿತವಾಗಿ ಬರಲಿ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ ವಿಚಾರದದಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಅವರು ಶೀಘ್ರವಾಗಿ ಬಿಡುಗಡೆಯಾಗಿ ಬಂದರೆ ತಮ್ಮಷ್ಟು ಸಂತೋಷ ಪಡುವವರು ಬೇರಾರೂ ಇಲ್ಲ ಎಂದು ಡಿಕೆಶಿ ಬಂಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ್ ಈ ಎಲ್ಲ ಸಂಕಷ್ಟದಿಂದ ಶೀಘ್ರವೇ ಪಾರಾಗಿ ಸುರಕ್ಷಿತವಾಗಿ ಬರಲಿ ಎಂದು ಹಾರೈಸುತ್ತೇನೆ. ನಾನು ನನ್ನ ಜೀವನದಲ್ಲಿ ಯಾರನ್ನೂ ದ್ವೇಷಿಸಿಲ್ಲ. ಯಾರಿಗೂ ಕೇಡು ಬಯಸಿಲ್ಲ. ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ. ಈ ಎಲ್ಲ ಆರೋಪಗಳಿಂದ ಮುಕ್ತರಾಗಿ ಅವರ ಹೊರಬಂದರೆ ಬೇರೆಲ್ಲರಿಗಿಂತಲೂ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದು ಹೇಳಿದರು.
ಅಕ್ರಮ ನಗದು ವಹಿವಾಟು ವಿಚಾರಣೆಗಾಗಿ ದೆಹಲಿಗೆ ಕರೆಯಿಸಿಕೊಂಡು ಸತತ ನಾಲ್ಕು ದಿನ ವಿಚಾರಣೆಗೆ ಒಳಪಡಿಸಿದ ಬಳಿಕ ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಬಂಧನದ ಬಳಿಕ ಅಸ್ವಸ್ಥಗೊಂಡಿರುವ ಡಿಕೆಶಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.