ಮುಂಬೈ,ಸೆ 04 (Daijiworld News/RD): ದೇಶದ ಆರ್ಥಿಕತೆ ತೀರಾ ಹಿಂಜರಿತ ಕಂಡಿದ್ದು, ಸರ್ಕಾರ ಇದನ್ನು ನಿಭಾಯಿಸುವಲ್ಲಿ ಎಡವಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಕೇಂದ್ರ ಮರೆಮಾಚಲು ಪ್ರಯತ್ನಿಸುತ್ತಿದ್ದು, ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ ಪ್ರತಿಕ್ರಿಯಿಸಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಮನಮೋಹನ್ ಸಿಂಗ್ ಅವರ ಸಲಹೆ ಪಡೆದುಕೊಳ್ಳುವುದು ತುಂಬಾ ಮುಖ್ಯ ಈ ವಿಚಾರದಲ್ಲಿ ರಾಜಕೀಯ ಮಾಡುವುದು ಒಳಿತಲ್ಲ ಎಂದು ಶಿವಸೇನೆ ಹೇಳಿದೆ.
ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆಯು ತನ್ನ “ಸಾಮ್ನಾ” ಪತ್ರಿಕೆಯ ಸಂಪಾದಕೀಯದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಮನಮೋಹನ್ ಸಿಂಗ್ ಮೊನ್ನೆಯಷ್ಟೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ದೇಶದ ಆರ್ಥಿಕ ಸಂಕಷ್ಟದ ಬಗ್ಗೆ ತಿಳಿಸಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಜಿಡಿಪಿ ಶೇ. 5ಕ್ಕೆ ಇಳಿದಿರುವುದು ಸುದೀರ್ಘ ಆರ್ಥಿಕ ಕುಸಿತಕ್ಕೆ ಸೂಚಕವಾಗಿದೆ ಎಂಬರ್ಥದಲ್ಲಿ ಮನಮೋಹನ್ ಸಿಂಗ್ ಎಚ್ಚರಿಸಿದ್ದಾರೆ. ಹಾಗೆಯೇ, ತಮ್ಮ ಸರ್ಕಾರವಿದ್ದಾಗ ಜಾಗತಿಕ ಆರ್ಥಿಕ ಹಿಂಜರಿತದ ಸ್ಥಿತಿಯಲ್ಲೂ ಸರಿಯಾದ ನೀತಿಗಳ ಮೂಲಕ ಆರ್ಥಿಕತೆಯನ್ನು ಬಲಪಡಿಸಿಕೊಳ್ಳುವತ್ತ ಹಲವು ಕ್ರಮಗಳನ್ನು ಕೈಗೊಂಡು, ವಿಶ್ವದಲ್ಲಿ 11ನೇ ಸ್ಥಾನದಲ್ಲಿ, ಜೊತೆಗೆ ದೇಶದ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿ 5ನೇ ಸ್ಥಾನಕ್ಕೇರಿಸಿದ್ದೆವು. ದೇಶದ ಆಥಿಕತೆ ಹಿಂಜರಿತ ಕಂಡಿದೆ, ಈ ಸಂದರ್ಭದಲ್ಲಿ ರಾಜಕೀಯ ಮಾಡುವುದನ್ನು ಬದಿಗಿಟ್ಟು ಕೇಂದ್ರ ಸರ್ಕಾರ ಆರ್ಥಿಕ ಚೇತರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮೋದಿ ಸರ್ಕಾರಕ್ಕೆ ಮನಮೊಹನ್ ಸಿಂಗ್ ಕಿವಿಮಾತು ಹೇಳಿದ್ದಾರೆ.
ಆದರೆ, ಮಾಜಿ ಪ್ರಧಾನಿಗಳ ಈ ಸಲಹೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದೆ ನಿರಾಕರಿಸಿದ್ದು ಈ ಬಗ್ಗೆ ಶಿವಸೇನೆ ಪ್ರತಿಕ್ರಿಯಿಸಿ ಬಿಜೆಪಿಗೆ ಬುದ್ದಿಹೇಳಿದೆ. ರಾಷ್ಟ್ರದ ಹಿತದೃಷ್ಠಿಯಿಂದ ಕೇಂದ್ರ ಮಾಜಿ ಪ್ರಧಾನಿಯ ಸಲಹೆ ಪಡೆಯುದು ಉತ್ತಮ ಈ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಕಡೆಗೆ ಗಮನ ನೀಡಬೇಕು ಎಂದಿದ್ದಾರೆ.
ಇತ್ತೀಚೆಗಷ್ಟೇ ದೇಶದ ಜಿಡಿಪಿ ಅಭಿವೃದ್ಧಿ ದರ ಶೇ. 5ಕ್ಕೆ ಇಳಿದಿದೆ ಎಂದು ಸರ್ಕಾರದ ಅಂಕಿ ಅಂಶಗಳೇ ತಿಳಿಸಿದ್ದವು. ಕಳೆದ ಆರು ವರ್ಷದಲ್ಲೇ ಇದು ಅತ್ಯಂತ ಕಡಿಮೆ ಜಿಡಿಪಿ ಎನ್ನಲಾಗಿದೆ. ಕಳೆದ ವರ್ಷ ಶೇ. 7ಕ್ಕಿಂತ ಹೆಚ್ಚು ಇದ್ದ ಜಿಡಿಪಿ ದರ ಈಗ ದಿಢೀರ್ ಕುಸಿದಿರುವುದು ಆರ್ಥಿಕ ವಿಷಮ ಸ್ಥಿತಿಗೆ ಸೂಚಕವಾಗಿದೆ.