ಮೈಸೂರು, ಸೆ.04(Daijiworld News/SS): ಕಾಂಗ್ರೆಸ್ ಯಾವುದೇ ರೀತಿಯ ಬ್ಲಾಕ್ಮೇಲ್ ಹಾಗೂ ಬೆದರಿಕೆ ತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಗಾಳ ಹಾಕಿತ್ತು. ಇವರ ಮೇಲಿದ್ದ ಪ್ರಕರಣವನ್ನು ಕೈಬಿಡುವ ಆಮಿಷವನ್ನೂ ಒಡ್ಡಿತ್ತು. ಇದಕ್ಕೆ ಸೊಪ್ಪು ಹಾಕದ್ದಕ್ಕೆ ಬಂಧಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಗುಜರಾತಿನ ಕಾಂಗ್ರೆಸ್ ಶಾಸಕರಿಗೆ ರಕ್ಷಣೆಗೆ ಕೊಟ್ಟಿದ್ದಕ್ಕೆ ಡಿ.ಕೆ.ಶಿವಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. ಸ್ವತಃ ಡಿ.ಕೆ.ಶಿವಕುಮಾರ್ ಅವರೇ ನನ್ನ ಜತೆ ಈ ಮಾತನ್ನು ಹೇಳಿದ್ದರು. ಬಿಜೆಪಿ ಇದೇ ಬಗೆಯ ಬ್ಲಾಕ್ಮೇಲ್ ತಂತ್ರ ಅನುಸರಿಸಿ ಕಾಂಗ್ರೆಸ್ ಸೇರಿದಂತೆ ಇತರೇ ಪಕ್ಷದ ಶಾಸಕರನ್ನು ತನ್ನತ್ತ ಸೆಳೆದುಕೊಂಡಿದೆ. ಬ್ಲಾಕ್ಮೇಲ್ಗೆ ಬಗ್ಗದವರಿಗೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳೆಂಬ ಗುಮ್ಮಗಳನ್ನು ಬಿಡುವ ಮೂಲಕ ಹೆದರಿಸುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಇಂತಹ ಬ್ಲಾಕ್ಮೇಲ್ ಹಾಗೂ ಬೆದರಿಕೆ ತಂತ್ರಗಳಿಗೆ ಬಗ್ಗುವುದಿಲ್ಲ. ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳು ಸಂಪೂರ್ಣವಾಗಿ ಕೇಂದ್ರ ಸರಕಾರದ ಕೈಗೊಂಬೆಗಳಾಗಿವೆ. ಚಿದಂಬರಂ ಮೇಲೂ ಇದೇ ಬಗೆಯಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.