ಬೆಂಗಳೂರು, ಸೆ 04 (DaijiworldNews/SM): ಮದ್ಯ ಮಾರಾಟ ಮಾಡುವಾಗ ಆಧಾರ್ ಸಂಖ್ಯೆ ನಮೂದಿಸುವ ಹೊಸ ಪ್ರಸ್ತಾಪ ಸರಕಾರ ಈಗಾಗಲೇ ಮುಂದಿಟ್ಟಿದೆ. ಈ ನಡುವೆ ಮತ್ತೊಂದು ಹೊಸ ನಿಯಮದ ಮೂಲಕ ಮದ್ಯ ಪ್ರಿಯರಿಗೆ ಸಿಹಿ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ.
ಇನ್ನು ಮುಂದೆ ಕುಡುಕರು ಮದ್ಯಕ್ಕಾಗಿ ಬಾರ್ ಅಥವಾ ವೈನ್ ಶಾಪ್ ಹುಡುಕಿಕೊಂಡು ಅಲೆದಾಡುವ ಅಗತ್ಯವಿಲ್ಲ. ಕುಡಿದು ರಸ್ತೆಯಲ್ಲಿ ಎಲ್ಲೆಂದರಲ್ಲಿ ಮಲಗುವ ಸನ್ನಿವೇಶ ತಪ್ಪಿಸುವ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೊಳಿಸಲಾಗುತ್ತಿದೆ. ಕುಡುಕರ ಮನೆಯ ಬಾಗಿಲಿಗೆ ಮದ್ಯ ಪೂರೈಕೆ ಮಾಡುವ ಚಿಂತನೆಯನ್ನು ನಡೆಸಲಾಗಿದೆ ಎಂದು ಅಬಕಾರಿ ಸಚಿವ ಎಚ್ ನಾಗೇಶ್ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಮಾತನಾಡಿದ ಅವರು, ''ಕೆಲವು ಊರುಗಳಲ್ಲಿ ಮದ್ಯದ ಅಂಗಡಿಗಳು ಸಾಕಷ್ಟು ದೂರದಲ್ಲಿರುತ್ತವೆ. ಇನ್ನು ಕೆಲವು ಕಡೆ ಮದ್ಯದಂಗಡಿಗಳೇ ಇರುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮನೆ ಬಾಗಿಲಿಗೇ ಮದ್ಯ ಪೂರೈಕೆ ಮಾಡುವ ಚಿಂತನೆ ಇಲಾಖೆಯ ಮುಂದಿದೆ'' ಎಂದು ಹೇಳಿದರು.
ಯಾವ ಊರಿನಲ್ಲಿ ವೈನ್ ಶಾಪ್, ಮದ್ಯದಂಗಡಿಗಳಿಲ್ಲವೋ ಅಲ್ಲಿಗೆ ಸಂಚಾರಿ ವೈನ್ ಶಾಪ್ ಮೂಲಕ ಮದ್ಯ ಪೂರೈಕೆಗೆ ಚಿಂತನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದರಿಂದ ಸರ್ಕಾರದ ಆದಾಯ ಕೂಡಾ ಹೆಚ್ಚಾಗಲಿದ್ದು, ಮಧ್ಯವರ್ತಿಗಳು, ಕಳ್ಳ ಬಟ್ಟಿ ಸರಾಯಿಯ ಹಾವಳಿ ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ.