ನವದೆಹಲಿ,ಸೆ 05 (Daijiworld News/RD): ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಗುರುವಿಗೆ ವಿಶೇಷ ಸ್ತಾನಮಾನವೀರುತ್ತದೆ. ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವವಾಗಿದ್ದು, ಅಂಥ ಗುರುವನ್ನು ಪೂಜಿಸುವ ದಿನ ಇಂದು. ದೇಶದಾದ್ಯಂತ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ದಿನಾಚರಣೆಯ ಅಂಗವಾಗಿ ಗೂಗಲ್ ಡೂಡಲ್ ಬಿಡಿಸುವ ಮೂಲಕ ಶಿಕ್ಷಕರಿಗೆ ವಿಶೇಷವಾಗಿ ಶುಭಾಶಯ ನೀಡಿದೆ.
ವಿಶೇಷ ದಿನಗಳಂದು ವಿಭಿನ್ನವಾಗಿ ಗೂಗಲ್ ಡೂಡಲ್ ಬಿಡಿಸಿ ಒಂದಿಷ್ಟು ಮಾಹಿತಿ ನೀಡಿ ಜೊತೆಗೆ ಗೌರವ ಸಲ್ಲಿಸುತ್ತದೆ. ಅದರಂತೆ ಇಂದು ಶಿಕ್ಷಕರ ದಿನಚರಣೆಯ ಅಂಗವಾಗಿ ಅಕ್ಟೋಪಸ್ ವೊಂದು ಶಿಕ್ಷಕನ ಮಾದರಿಯಲ್ಲಿ ಏಕ ಸಮಯದಲ್ಲಿ ಹಲವಾರು ಕೆಲಸಗಳನ್ನು ನಿಭಾಯಿಸುವ ರೀತಿಯಲ್ಲಿ ಗೂಗಲ್ ಡೂಡಲ್'ನ್ನು ವಿನ್ಯಾಸಗೊಳಿಸಿದೆ.
ಅಕ್ಟೋಪಸ್ ವೊಂದು ನಗು ನಗುತ್ತಾ ಗಣಿತದ ಸಮೀಕರಣಗಳನ್ನು ಪರಿಹರಿಸುವುದು, ರಸಾಯನಶಾಸ್ತ್ರದ ಸಮಸ್ಯೆಗಳನ್ನು ಹೇಳಿಕೊಡುವುದು, ಪುಸ್ತಕದ ಪ್ರತಿಗಳನ್ನು ಓದುವುದು, ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವುದು ಮತ್ತು ಸಂಗೀತದಲ್ಲಿ ಮಾರ್ಗದರ್ಶನ ಮಾಡುವುದನ್ನು ಈ ಡೂಡಲ್ ನಲ್ಲಿ ಕಾಣಬಹುದಾಗಿದೆ. ಇಲ್ಲಿ ಆಕ್ಟೋಪಸ್'ನ ಗುರುಗಳಾಗಿ ಬಿಂಬಿಸಿದ್ದು, ಇನ್ನು ವಿದ್ಯಾರ್ಥಿಗಳಾಗಿ ಮೀನುಗಳನ್ನು ತೋರಿಸಲಾಗಿದೆ. ಈ ಮೂಲಕ ಒಬ್ಬ ಶಿಕ್ಷಕ ಯಾವೆಲ್ಲಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾನೆ, ಮತ್ತು ವಿದ್ಯಾರ್ಥಿಗಳಿಗೆ ಯಾವ ರೀತಿಯಾಗಿ ಮಾರ್ಗದರ್ಶನ ನೀಡುತ್ತಾನೆ ಎಂಬುವುದನ್ನು ಈ ಮೂಲಕ ತಿಳಿಸಲಾಗಿದೆ.