ನವದೆಹಲಿ ಸೆ 05 (Daijiworld News/RD): ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ಕಡಿವಾಣ ಹಾಕುವ ನಿಟ್ಟಿನಿಂದ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಹೊಸ ಮೋಟಾರು ವಾಹನ ಕಾಯ್ದೆಯು, ಜಾರಿಗೆ ಬಂದ ವಾರದೊಳಗೆ, ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.
ದೆಹಲಿಯ ಗುರುಗ್ರಾಮದಲ್ಲಿ ಮದನ್ ಎಂಬ ಹೊಂಡಾ ಸ್ಕೂಟರ್ ಸವಾರನಿಗೆ ಪೊಲೀಸರು ಭರ್ಜರಿ 23000 ರು. ದಂಡ ಹಾಕಿದ್ದಾರೆ. ಕಾರ್ಯನಿಮಿತ್ತ ದೆಹಲಿಯಿಂದ ಗುರುಗ್ರಾಮಕ್ಕೆ ಬಂದು, ಮರಳುವ ವೇಳೆ ಅಡ್ಡಗಟ್ಟಿದ ಪೊಲೀಸರು ವಿವಿಧ ದಾಖಲೆಗಳನ್ನು ಕೇಳಿದ್ದರು. ಆದರೆ ಮದನ್ ಬಳಿ ಡಿಎಲ್, ಆರ್ಸಿ, ವಿಮಾ, ಮಾಲಿನ್ಯ ಪ್ರಮಾಣ ಪತ್ರ ಸೇರಿದಂತೆ ಯಾವುದೇ ದಾಖಲೆ ಇರಲಿಲ್ಲ. ಜೊತೆಗೆ ಹೆಲ್ಮೆಟ್ ಕೂಡಾ ಧರಿಸಿದ ಕಾರಣಕ್ಕೆ ಆತನಿಗೆ ಪೊಲೀಸರು 23000 ರು. ದಂಡ ವಿಧಿಸಿದ್ದಾರೆ. ಮದನ್ ಓಡಿಸುತ್ತಿದ್ದ ಸ್ಕೂಟರ್ ಮೌಲ್ಯವೇ 15000 ರು.ಗಿಂತ ಹೆಚ್ಚಿಲ್ಲ. ಗುರುಗ್ರಾಮದಲ್ಲೇ ಅಮಿತ್ ಎಂಬ ಇನ್ನೊಬ್ಬ ಸ್ಕೂಟರ್ ಸವಾರನಿಗೂ ಇದೇ ರೀತಿ 24000 ರು. ದಂಡ ವಿಧಿಸಲಾಗಿದೆ. ಇನ್ನು ಗುರುಗ್ರಾಮದಲ್ಲಿ ಟ್ರಾಕ್ಟರ್ ಚಾಲಕನೊಬ್ಬನಿಗೆ 59000 ರು. ದಂಡ ವಿಧಿಸಲಾಗಿದೆ.
ಇದೇ ರೀತಿಯಾಗಿ ಆ ಗ್ರಾಮದಲ್ಲಿ ಇನ್ನೊಂದು ಘಟನೆ ನಡೆದಿದ್ದು ಅಟೋ ಚಾಲಕನಿಗೆ ಬರೋಬ್ಬರಿ 32500 ರೂ. ದಂಡ ವಿಧಿಸಿದ್ದಾರೆ. ಸಂಚಾರಿ ಪೊಲೀಸರು ಆಟೋ ತಡೆದು, ನೋಂದಣಿ ಪ್ರಮಾಣಪತ್ರ (ಆರ್ಸಿ), ಚಾಲನಾ ಪರವಾನಗಿ (ಡಿಎಲ್), ಮಾಲಿನ್ಯ ಪ್ರಮಾಣಪತ್ರ, ವಿಮಾ ಪತ್ರ ಕೇಳಿದಾಗ ಆತನ ಬಳಿ ಯಾವ ದಾಖಲೆಯು ಇಲ್ಲದ ಕಾರಣ ಆತನಿಗೆ 32500 ರೂ. ದಂಡ ವಿಧಿಸಿದ್ದಾರೆ. ಇನ್ನು ಒಡಿಶಾದ ಭುವನೇಶ್ವರದಲ್ಲಿ ಆಟೋ ಚಾಲಕನಲ್ಲಿ ಪರ್ಮಿಟ್, ಲೈಸೆನ್ಸ್, ಆರ್ಸಿ ದಾಖಲೆಗಳನ್ನು ಪರಿಶೀಲಿಸಿದಾಗ ಆತನಲ್ಲಿ ಇಲ್ಲದಿರುವುದನ್ನು ಗಮನಿಸಿ ಆರ್ಟಿಒ ಅಧಿಕಾರಿಗಳು ಭರ್ಜರಿ 47500 ರೂ ದಂಡ ವಿಧಿಸಿದ್ದಾರೆ.