ನವದೆಹಲಿ,ಸೆ 05 (Daijiworld News/RD): ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿಂದಂತೆ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ, ಇಡಿ ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಂದು ಸುಪ್ರೀಂ ಕೊರ್ಟ್ ವಜಾಗೊಳಿಸಿದೆ.
ಇಡಿ ಬಂಧನದಿಂದ ರಕ್ಷಣೆ ಕೋರಿ ಪಿ ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಂದು ಸುಪ್ರೀಂ ಕೊರ್ಟ್ ನಿರಾಕರಿಸಿದ್ದು, ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಅನುಮತಿ ಕೊಡುವಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿದ ಮನವಿಗೆ ಒಪ್ಪಿಗೆ ನೀಡಿದೆ. ಹೀಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇನ್ನು ಯಾವಾಗ ಬೇಕಾದರೂ ಚಿದಂಬರಂ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬಹುದಾಗಿದೆ.
ಆರ್ಥಿಕ ಅಪರಾಧ ಪ್ರಕರಣಗಳು ವಿವಿಧ ಆಯಾಮಗಳನ್ನು ಹೊಂದಿರುತ್ತವೆ. ಹಣಕಾಸು ಅವ್ಯವಹಾರಗಳ ವಿಚಾರದಲ್ಲಿ ನಿರೀಕ್ಷಣಾ ಜಾಮೀನು ನೀಡುವುದರಿಂದ ಅದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರು ವಿಚಾರಣಾ ನ್ಯಾಯಾಲಯದಲ್ಲಿ ರೆಗ್ಯುಲರ್ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದೆ.
ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಚಿದಂಬರಮ್ ಅವರು ಕಳೆದ 15 ದಿನಗಳಿಂದಲೂ ಸಿಬಿಐ ಕಸ್ಟಡಿಯಲ್ಲೇ ಇದ್ದಾರೆ. ಇದೀಗ ಅವರನ್ನು ಇಡಿ ಯಾವುದೇ ಕ್ಷಣದಲ್ಲಾದರೂ ತನ್ನ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.