ಬೆಂಗಳೂರು,ಸೆ 05 (Daijiworld News/RD): ಮದ್ಯ ಕುಡಿದು ರಸ್ತೆಯ ಎಲ್ಲೆಂದರಲ್ಲಿ ಮಲಗುವ ಸನ್ನಿವೇಶ ತಪ್ಪಿಸುವ ನಿಟ್ಟಿನಲ್ಲಿ ಮನೆ ಮನೆಗೆ ಮದ್ಯ ಸರಬರಾಜು ಮಾಡುವುದಾಗಿ ರಾಜ್ಯ ಸರ್ಕಾರ ಹೊಸ ನಿಯಮ ರೂಪಿಸುತ್ತಿದೆ. ಈ ಬಗ್ಗೆ ಗೊಂದಲ ನಿರ್ಮಾಣವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ನಾಗೇಶ್, ಆನ್ಲೈನ್ ಮೂಲಕ ಮನೆಮನೆಗೆ ಮದ್ಯ ಮಾರಾಟ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನ್ ಲೈನ್ನಲ್ಲಿ ಮದ್ಯ ಮಾರಾಟ ವ್ಯವಸ್ಥೆ ಮಾಡುವುದಿಲ್ಲ. ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಆನ್ಲೈನ್ ವ್ಯವಸ್ಥೆ ಮೂಲಕ ಮಾರಾಟ ಮಾಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಆನ್ ಲೈನ್ ಮೂಲಕ ಮದ್ಯ ಮಾರಾಟ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು. ನಿನ್ನೆ ನನಗೆ ಸ್ವಲ್ಪ ಮಾಹಿತಿ ಕೊರತೆ ಇತ್ತು. ತಪ್ಪಾಗಿ ಮಾತನಾಡಿದ್ದೇನೆ ಕ್ಷಮೆ ಇರಲಿ ಎಂದು ತಿಳಿಸಿದರು. ಈಗಾಗಲೇ ಮಹಿಳೆಯರು ಈ ವಿಷಯದ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದಾರೆ, ಅವರಿಗೆ ನೋವಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹೇಳಿದರು.
ಮದ್ಯ ಕುಡಿದು ರಸ್ತೆಯಲ್ಲಿ ಎಲ್ಲೆಂದರಲ್ಲಿ ಮಲಗುವ ಸನ್ನಿವೇಶ ತಪ್ಪಿಸುವ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೊಳಿಸುತ್ತಿದ್ದು, ಇನ್ನು ಮುಂದೆ ಕುಡುಕರು ಮದ್ಯಕ್ಕಾಗಿ ಬಾರ್ ಅಥವಾ ವೈನ್ ಶಾಪ್ ಹುಡುಕಿಕೊಂಡು ಅಲೆದಾಡುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು. ಇನ್ನು ತಾಂಡಾಗಳಲ್ಲಿ ಜನ ಕಳ್ಳಬಟ್ಟಿ ಕುಡಿಯುತ್ತಿದ್ದು, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅವರ ಆರೋಗ್ಯ ಕಾಪಾಡುವ ಸಲುವಾಗಿ ತಾಂಡಾಗಳಲ್ಲಿ ಸಂಚಾರಿ ಮದ್ಯ ಮಾರಾಟ ಮಳಿಗೆ ತೆರೆಯಲಾಗುವುದು ಎಂದರು. ಹೊಸ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡುವುದಿಲ್ಲ. ಆದರೆ ಎಂಎಸ್ಐಎಲ್ ಮಳಿಗೆಗಳನ್ನು ಪ್ರತಿ ಹಳ್ಳಿಗಳಲ್ಲೂ ತೆರೆಯಲಾಗುವುದು ಎಂದು ಸೂಚಿಸಿದೆ. ಪ್ರತಿ ವರ್ಷವೂ ಮದ್ಯ ಮಾರಾಟ ಪ್ರಮಾಣ ಶೇ 10 ರಷ್ಟು ಏರಿಕೆ ಕಾಣುತ್ತಿದ್ದು, ಆದಾಯ ಕೂಡ ಹೆಚ್ಚಳವಾಗುತ್ತಿದೆ ಎಂದು ಸಚಿವರು ಹೇಳಿದರು.