ಬೆಂಗಳೂರು, ಸೆ.06(Daijiworld News/SS): ಚಂದ್ರನ ಮೇಲೆ ಇಳಿಯುವ ಚಂದ್ರಯಾನ-2 ಲ್ಯಾಂಡರ್ 'ವಿಕ್ರಮ್', ಚಂದಿರನ ಮತ್ತಷ್ಟು ಹತ್ತಿರಕ್ಕೆ ಹೋಗಿದ್ದು, ಚಂದ್ರನ ದಕ್ಷಿಣ ಧ್ರುವದತ್ತ ಚಲಿಸಿದೆ. ಚಂದ್ರಯಾನ–2 ಬಾಹ್ಯಾಕಾಶ ನೌಕೆಯಿಂದ ‘ವಿಕ್ರಮ್’ ಲ್ಯಾಂಡರ್ ಇಳಿಸುವ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ.
ಜುಲೈ 22ರಂದು ಚಂದ್ರಯಾನ ನೌಕೆ ಉಡಾವಣೆ, ಕಕ್ಷೆಯಲ್ಲಿ ನೌಕೆಯನ್ನು ಮೇಲೇರಿಸುತ್ತಾ ಹೋಗಿದ್ದು, ಚಂದ್ರನ ಕಕ್ಷೆ ಪ್ರವೇಶ ಹಾಗೂ ಕಕ್ಷೆಯ ಅವರೋಹಣ ಯಶಸ್ವಿಯಾಗಿ ನಡೆದಿದೆ. ಇದಕ್ಕೂ ಮೊದಲು ಚಂದ್ರಯಾನ–1’ ಮತ್ತು ‘ಮಂಗಳಯಾನ–1’ರಲ್ಲಿ ಕಕ್ಷೆಗೆ ಸೇರಿಸುವ ಕಾರ್ಯ ಯಶಸ್ವಿಯಾಗಿ ನಡೆದಿತ್ತು.
ಇದೀಗ ಕಕ್ಷೆ, ಲ್ಯಾಂಡರ್ ನಿಯಂತ್ರಣ ಕೇಂದ್ರದಲ್ಲಿ ವಿಜ್ಞಾನಿಗಳಿಂದ ಅಂತಿಮ ಸಿದ್ಧತೆ ನಡೆದಿದೆ. ಶನಿವಾರ (ಸೆ.07) ಮುಂಜಾನೆ 1.30ರಿಂದ 2.20ರ ಅವಧಿಯಲ್ಲಿ ಮಾತೃ ನೌಕೆಯಿಂದ ಪ್ರತ್ಯೇಕಗೊಳ್ಳುವ ಲ್ಯಾಂಡರ್ ಚಂದ್ರನ ನೆಲವನ್ನು ಸ್ಪರ್ಶ ಮಾಡಲಿದೆ.
ಲ್ಯಾಂಡರ್ ಇಳಿಸುವ ಕೌಶಲಕ್ಕೆ ಕೈಹಾಕಿರುವುದು ಇದೇ ಮೊದಲು. ಈ ಪ್ರಕ್ರಿಯೆ ನಾಜೂಕಿನದು. ಸಣ್ಣ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು. ಭೂನಿಯಂತ್ರಣ ಕೇಂದ್ರದಿಂದ ಎಲ್ಲವನ್ನು ನಿಭಾಯಿಸಲಾಗುತ್ತದೆ. ಇದೂ ನಮಗೆ ಹೊಸದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.