ತೆಲಂಗಾಣ, ಸೆ 06 (Daijiworld News/RD): ಕೇಕ್ ಕತ್ತರಿಸಿ ಮನೆ ಮಂದಿಗಳೆಲ್ಲಾ ಸಿಹಿ ತಿನ್ನಿಸಿ ಹುಟ್ಟುಹಬ್ಬವನ್ನು ಆಚರಿಸಬೇಕೆಂದು ಹಂಬಲಿಸುತ್ತಿದ್ದ 9 ವರ್ಷದ ಪುಟ್ಟ ಬಾಲಕನ ಆಸೆ, ಆತನನ್ನು ಹಾಗೂ ಆತನ ತಂದೆಯ ಜೀವ ಬಲಿ ಪಡೆದುಕೊಂಡಿದೆ. ಈ ಘಟನೆ ತೆಲಂಗಾಣದ ಸಿದ್ದಿಪೇಟೆಯ ಆಯಿನಾಪುರ ಎಂಬಲ್ಲಿ ನಡೆದಿದೆ.
9 ವರ್ಷದ ರಾಮಚರಣ್ ತನ್ನ ಹುಟ್ಟುಹಬ್ಬಕ್ಕೆ ಕೇಕ್ ಬೇಕೆಂದು ಅಪ್ಪನ ಬಳಿ ಕೇಳಿದಾಗ ಆತ ಕೊಡಿಸಲು ಒಪ್ಪಿರಲಿಲ್ಲ. ಹೀಗಾಗಿ, ತನ್ನ ಚಿಕ್ಕಪ್ಪನ ಬಳಿ ಹೇಳಿದಾಗ, ಆತನ ಚಿಕ್ಕಪ್ಪ ದೊಡ್ಡದಾದ ಕೇಕ್ ಕಳುಹಿಸಿದ್ದರು. ಬಳಿಕ ಮನೆ ಮಂದಿಯ ಜೊತೆ ಕೇಕ್ ಕತ್ತರಿಸಿದ್ದ ಆ ಬಾಲಕ ತನ್ನ ಅಪ್ಪ, ಅಮ್ಮ ಮತ್ತು ತಂಗಿಗೆ ತಿನ್ನಿಸಿದ್ದ. ಆದರೆ, ಆ ಕೇಕ್ ತುಂಡನ್ನು ತಿಂದ ಸ್ವಲ್ಪ ಹೊತ್ತಿನಲ್ಲೇ ಮನೆಯವರೆಲ್ಲರೂ ತೀವ್ರವಾಗಿ ಅಸ್ವಸ್ಥರಾಗಿದ್ದು, ಇದನ್ನು ಗಮನಿಸಿದ ಪಕ್ಕದ ಮನೆಯವರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ರಾಮಚರಣ್ ಮತ್ತು ಆತನ ತಂದೆ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. ಅದೃಷ್ಠವಶಾತ್ ಆತನ ಅಮ್ಮ ಮತ್ತು ತಂಗಿ ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದಾಗ ರಾಮಚರಣ್ನ ಚಿಕ್ಕಪ್ಪ ಶ್ರೀನಿವಾಸ್ ಕೇಕ್ನಲ್ಲಿ ವಿಷ ಬೆರೆಸಿದ್ದ ಎಂಬ ಸತ್ಯ ಬೆಳಕಿಗೆ ಬಂದಿದೆ. ಜಮೀನಿನ ಕಾರಣಕ್ಕೆ ಎರಡೂ ಕುಟುಂಬಗಳ ನಡುವೆ ದ್ವೇಷವಿತ್ತು ಎಂದು ಹೇಳಲಾಗಿದೆ. ನಗರದ ಪೊಲೀಸರು ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.