ನವದೆಹಲಿ, ಸೆ.06(Daijiworld News/SS): ಭಾರತ ಮತ್ತು ಪ್ರಪಂಚದ ಉಳಿದ ದೇಶಗಳು ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಆದರ್ಶಪ್ರಾಯ ಪರಾಕ್ರಮವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತದ 130 ಕೋಟಿ ಜನರು ಕಾತರದಿಂದ ಕಾಯುತ್ತಿರುವ ಕ್ಷಣ ಇನ್ನು ಕೆಲವೇ ಗಂಟೆಗಳಲ್ಲಿ ಬರಲಿದೆ. ಚಂದ್ರಯಾನ-2 ಗಗನನೌಕೆ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿಯುವ ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಅದ್ಭುತ ಕ್ಷಣವನ್ನು ಸವಿಯಲು ನಾನು ಬೆಂಗಳೂರಿನಲ್ಲಿರುವ ಇಸ್ರೊ ಕೇಂದ್ರಕ್ಕೆ ಹೋಗಲು ಪುಳಕಿತನಾಗಿದ್ದೇನೆ. ಆ ವಿಶೇಷ ಕ್ಷಣವನ್ನು ನನ್ನೊಂದಿಗೆ ಹಂಚಿಕೊಳ್ಳಲು ಹಲವು ವಿಜ್ಞಾನಿಗಳು ಮತ್ತು ಮುಂದಿನ ಭಾರತದ ಭವಿಷ್ಯದ ಪ್ರಜೆಗಳಾದ ಮಕ್ಕಳು ಸಹ ನನ್ನ ಜೊತೆ ಸೇರಿಕೊಳ್ಳಲಿದ್ದಾರೆ. ಇಂದಿನ ಮಕ್ಕಳೊಂದಿಗೆ ಕುಳಿತುಕೊಂಡು ಚಂದ್ರಯಾನ-2ವನ್ನು ಕಣ್ತುಂಬಿಕೊಳ್ಳುವುದೇ ನನಗೆ ವಿಶೇಷ ಎಂದು ಮೋದಿ ಹೇಳಿದ್ದಾರೆ.