ಜಮ್ಮು-ಕಾಶ್ಮೀರ, ಸೆ 06 (Daijiworld News/MSP): ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ, ಕೆಂಡ ಕಾರುತ್ತಿರುವ ಪಾಕಿಸ್ತಾನ ಪದೇ ಪದೇ ಯುದ್ಧೋತ್ಸಾಹವನ್ನು ತೋರುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಭಾರತದ ಮೇಲೆ ಪ್ರಚೋದನೆ ಹಾಗು ಬೆದರಿಕೆ ತಂತ್ರವನ್ನು ಒಡ್ಡುತ್ತಿರುವ ಪಾಕ್ ಇದೀಗ ಗಡಿ ನಿಯಂತ್ರಣ ರೇಖೆ ಬಳಿ ಭಾರೀ ಪ್ರಮಾಣದಲ್ಲಿ ಸೇನೆ ಹಾಗೂ ಉಗ್ರರನ್ನು ನಿಯೋಜಿಸುತ್ತಿದೆ ಎಂದು ತಿಳಿದುಬಂದಿದೆ.
ಪಾಕ್ ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಬಾಘ್ ಹಾಗೂ ಕೋಟ್ಲಿ ವಲಯದಲ್ಲಿ ಸುಮಾರು 2,000ಕ್ಕೂ ಹೆಚ್ಚು ಸೈನಿಕ ಪಡೆಯನ್ನು ನಿಯೋಜಿಸಿದೆ. ಈ ಬಗ್ಗೆ ಭಾರತೀಯ ಸೇನೆಗೂ ತಿಳಿದುಬಂದಿದ್ದು, ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸ್ಥಳೀಯರ ನೆರವಿನೊಂದಿಗೆ, ಪಾಕ್ ಅತ್ಯಧಿಕ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಶೇಖರಿಸಿಟ್ಟಿದ್ದು ಇದೆಲ್ಲವೂ ಭಾರತದ ಒಳನುಗ್ಗುವ ಉಗ್ರರಿಗೆ ಸರಬರಾಜು ಮಾಡಲು ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ.
ಒಂದು ಮಾಹಿತಿ ಪ್ರಕಾರ, ಸುಮಾರು 60ಕ್ಕೂ ಅಧಿಕ ಉಗ್ರರು ಭಾರತದೊಳಗೆ ನುಗ್ಗಲು ತಯಾರಿ ಮಾಡಿಕೊಂಡಿದ್ದು, ದುಡಗಾಯ್, ಡುರ್ಮಾಟ್, ಲೋಸಾರ್, ಟೌಬಾಟ್ ಮತ್ತು ಸೋನಾರ್ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಉಗ್ರರ ತಂಡ ಬೀಡು ಬಿಟ್ಟಿರುವುದಾಗಿ ಎಂದು ತಿಳಿದುಬಂದಿದೆ.
ಕಾಶ್ಮೀರದ ಸ್ಥಳೀಯರಿಗಿಂತಾ ಹೆಚ್ಚಾಗಿ ಇದೀಗ ಅಫ್ಘಾನಿಸ್ತಾನದ ಉಗ್ರರನ್ನು ಪಾಕಿಸ್ತಾನ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ ಎಂಬುವುದು ಹೊರಬಿದ್ದಿದೆ.