ನವದೆಹಲಿ, ಸೆ.06(Daijiworld News/SS): ವಿಶ್ವವೇ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಐತಿಹಾಸಿಕ ಕ್ಷಣ ಸನಿಹವಾಗಿದೆ. ಭಾರತಕ್ಕೆ ಮಹತ್ವದ ಸ್ಥಾನ ಕಲ್ಪಿಸಿಕೊಡಲಿರುವ ಚಂದ್ರಯಾನ-2 ಯೋಜನೆ ಯಶಸ್ಸಿನ ಹೊಸ್ತಿಲಲ್ಲಿದೆ. ಸೆಪ್ಟೆಂಬರ್ 7ರಂದು ಮುಂಜಾನೆ ವೇಳೆ ಲ್ಯಾಂಡರ್ನಿಂದ ಪ್ರಜ್ಞಾನ್ ರೋವರ್ ಪ್ರತ್ಯೇಕಗೊಂಡು ಚಂದ್ರನ ಅಂಗಳದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.
ಸೆ.7ರಂದು ತಡರಾತ್ರಿ ಸುಮಾರು 1 ರಿಂದ 2 ಗಂಟೆಯ ನಡುವೆ ಲ್ಯಾಂಡರ್, ಚಂದ್ರನ ಅಂಗಳದ ಕಡೆಗೆ ಇಳಿಯುವ ಕಕ್ಷಾವತರಣ ಪ್ರಕ್ರಿಯೆ ಆರಂಭವಾಗಲಿದೆ. ಬಳಿಕ 1.30ರಿಂದ 2.30ರ ನಡುವೆ ಅತ್ಯಂತ ಭೀತಿಯ ಟಚ್ಡೌನ್ ಪ್ರಕ್ರಿಯೆ ನಡೆಸಲಾಗುತ್ತದೆ. ಟಚ್ಡೌನ್ ಬಳಿಕ ಬೆಳಗ್ಗೆ 5.30ರಿಂದ 6.30ರ ನಡುವೆ ವಿಕ್ರಮ್ ಲ್ಯಾಂಡರ್ ಒಳಗಿಂದ ರೋವರ್ ಪ್ರಗ್ಯಾನ್ ಹೊರ ಬಂದು ಚಂದ್ರನ ಅಂಗಳದ ಮೇಲೆ ಇಳಿಯಲಿದೆ. ಇದು ಸುಮಾರು 14 ದಿನಗಳ ಕಾಲ ಚಂದ್ರನ ಮೇಲೆ ಅಧ್ಯಯನ ಮಾಡಲಿದೆ. ಉಳಿದಂತೆ ಆರ್ಬಿಟರ್, ಒಂದು ವರ್ಷ ಕಾಲ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತದೆ ಎಂದು ಇಸ್ರೋ ಮೂಲಗಳು ತಿಳಿಸಿದೆ.
ವಿಶ್ವದ ಯಾವ ರಾಷ್ಟ್ರವೂ ಚಂದ್ರನ ಮತ್ತೊಂದು ಪಾರ್ಶ್ವಮುಖವಾದ ದಕ್ಷಿಣ ಧ್ರುವವವನ್ನು ಅಧ್ಯಯನ ಮಾಡಿಲ್ಲವಾದುದರಿಂದ ಚಂದ್ರಯಾನ-2 ಯೋಜನೆಯನ್ನು ವಿಶ್ವವೇ ಕಣ್ಣರಳಿಸಿ ನೋಡುತ್ತಿದೆ.ಚಂದ್ರನಲ್ಲಿಗೆ ರಷ್ಯಾ, ಅಮೆರಿಕ ಮತ್ತು ಚೀನಾ ಈ ಮೂರೇ ರಾಷ್ಟ್ರಗಳು ರೋವರ್ ಕಳುಹಿಸಿವೆ. ಈಗ ಈ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ಭಾರತವು ಚಂದ್ರನ ದಕ್ಷಿಣ ಭಾಗದ ಬಗ್ಗೆ ಅಧ್ಯಯನ ನಡೆಸಲಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಉಡಾವಣೆಯಾದ ದಿನದಿಂದ ಪ್ರತಿ ಹಂತದಲ್ಲೂ ಚಂದ್ರಯಾನ-2 ಯಶಸ್ವಿಯಾಗಿದೆ. ಈಗಾಗಲೇ ಚಂದ್ರನ ಕಕ್ಷೆಗೆ ಹತ್ತಿರವಾಗುವವ ಎರಡು ಚಟುವಟಿಕೆಗಳನ್ನು ಕಳೆದೆರಡು ದಿನದಿಂದ ಯಶಸ್ವಿಯಾಗಿ ಮುಕ್ತಾಯಗೊಳಿಸಿ ಬುಧವಾರ ಬೆಳಗಿನ ಜಾವ ಅಂತಿಮ ಕಕ್ಷೆಗೆ ವಿಕ್ರಂ ಲ್ಯಾಂಡರ್ ಬಂದು ಸೇರಿದೆ. ಸೆ.7ರ ಬೆಳಗಿನ ಜಾವ 1ರಿಂದ 2 ಗಂಟೆಯ ಅವಧಿಯಲ್ಲಿ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆರಂಭವಾಗುತ್ತದೆ. ನಾಲ್ಕೈದು ಹಂತಗಳಲ್ಲಿ ಸ್ವಯಂಚಾಲಿತವಾಗಿ ವಿವಿಧ ಚಟುವಟಿಕೆ ನಡೆಸುತ್ತ 15 ನಿಮಿಷದಲ್ಲಿ 35 ಕಿ.ಮೀ. ದೂರದಲ್ಲಿರುವ ಚಂದ್ರನ ಮೇಲೆ ಮ್ಯಾನ್ಜಿನಸ್ ಸಿ ಮತ್ತು ಸಿಂಪೆಲಿಯಸ್ ಎನ್ ಎಂಬ ಎರಡು ಕುಳಿಗಳ ನಡುವೆ ಯೋಗ್ಯ ಜಾಗವನ್ನು ತಾನೇ ಗುರುತಿಸಿಕೊಂಡು ಲ್ಯಾಂಡ್ ಆಗಲಿದೆ.
ಈ ಮೂಲಕ ಚಂದ್ರನ ಮೇಲೆ ಸುರಕ್ಷಿತ ಲ್ಯಾಂಡ್ ಆದ ವಿಶ್ವದ ನಾಲ್ಕನೇ ದೇಶ ಎಂಬುದರ ಜತೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆದ ಹಾಗೂ ಮೊದಲ ಪ್ರಯತ್ನದಲ್ಲೇ ಚಂದ್ರಯಾನ ಯಶಸ್ವಿಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗಳಿಗೆ ಭಾರತ ಪಾತ್ರವಾಗಲಿದೆ.