ಗೋವಾ, ಸೆ.06(Daijiworld News/SS): ಗೋವಾದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಯೋರ್ವರಿಗೆ ರಕ್ತದಾನ ಮಾಡುವ ಮೂಲಕ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.
ಗೋವಾದ ಬಾಂಬೊಲಿಮ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಅಬ್ದುಲ್ ಖಾದರ್ ಎಂಬವರು ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ 5 ಯುನಿಟ್ ಎಬಿ ನೆಗಟಿವ್ ತುರ್ತು ರಕ್ತದ ಅವಶ್ಯಕತೆಯಿರುವ ಬೇಡಿಕೆಯ ಕರೆಯು ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಕಾರ್ಯ ನಿರ್ವಾಹಕರಿಗೆ ಬಂದಿತ್ತು. ಈ ಸಂದರ್ಭದಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಬ್ಲಡ್ ಡೋನರ್ಸ್ ಸಂಸ್ಥೆಯ ಸದಸ್ಯರು ಗೋವಾಕ್ಕೆ ತೆರಳಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಬ್ಲಡ್ ಡೋನರ್ಸ್ ಸಂಸ್ಥೆಯ ಸದಸ್ಯರಾದ ಅಝರ್ ವಿಟ್ಲ, ಜಾವೇದ್ ಕುತ್ತಾರ್, ರಮೇಶ್ ಕಾಸರಗೋಡ್ ಮಾಹಿಪಾಡಿ ರಕ್ತದಾನ ಮಾಡಿ ಮಾದರಿಯಾದವರು. ಇದೀಗ ಈ ತಂಡದ ಸದಸ್ಯರ ಮಾನವೀಯತೆಯ ಕಾರ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಬ್ಲಡ್ ಡೋನರ್ಸ್ ಮಂಗಳೂರು ತಂಡವು ಕಳೆದ ಆರು ವರ್ಷಗಳಿಂದ ಕರ್ನಾಟಕದ, ಕೇರಳ ಮತ್ತು ಇತರೆ ರಾಜ್ಯಗಳಲ್ಲಿ, ವಿದೇಶದಲ್ಲಿ ನಿರಂತರವಾಗಿ ರಕ್ತದಾನ ಶಿಬಿರ ಹಾಗೂ ರಕ್ತ ಪೂರೈಕೆಯನ್ನು ಆಯೋಜಿಸುತ್ತಲೇ ಬಂದಿದೆ. ಆರು ವರ್ಷಗಳಲ್ಲಿ ಇನ್ನೂರು ರಕ್ತದಾನ ಶಿಬಿರ, ಹದಿನೆಂಟು ಸಾವಿರಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸಿ ಪೂರೈಕೆ ಮಾಡಿದೆ.