ಬೆಂಗಳೂರು, ಸೆ.06(Daijiworld News/SS): ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವುದು ನೆರೆ ಪ್ರದೇಶಗಳಿಗೆ ಭೇಟಿ ನೀಡಲು ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಜ್ಯ ಬಿಜೆಪಿ ವಲಯದಲ್ಲಿ ಮೋದಿ ನೆರೆ ಪ್ರದೇಶ ವೀಕ್ಷಿಸಲು ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯಕ್ಕೆ ಮೋದಿ ಬರುತ್ತಿರುವುದು ಇಸ್ರೊದಲ್ಲಿ ಚಂದ್ರಯಾನ -2 ವೀಕ್ಷಿಸಲು. ನೆರೆ ಪ್ರದೇಶಗಳಿಗೆ ಭೇಟಿ ನೀಡಲು ಅವರು ರಾಜ್ಯಕ್ಕೆ ಬರುತ್ತಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿಯ ಕಾರ್ಯಕರ್ತರು, ಅವರು ನೆರೆ ಪ್ರದೇಶಗಳ ಭೇಟಿಗೆ ಬರುತ್ತಿರುವುದಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಲಿದ್ದು, ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೊ ಟೆಲಿಮೆಟ್ರಿ, ಟ್ರಾಕಿಂಗ್ ಆಂಡ್ ಕಮಾಂಡ್ ನೆಟ್ವರ್ಕ್ನಲ್ಲಿ(ಇಸ್ಟ್ರಾಕ್) ವಿಜ್ಞಾನಿಗಳು, ಅತಿಗಣ್ಯ ವ್ಯಕ್ತಿಗಳು ಹಾಗೂ ಆನ್ಲೈನ್ ಕ್ವಿಜ್ನಲ್ಲಿ ಜಯಿಸಿ ಆಯ್ಕೆಯಾಗಿರುವ ಶಾಲಾ ಮಕ್ಕಳ ಜತೆ ಲ್ಯಾಂಡಿಂಗ್ ವೀಕ್ಷಿಸಲಿದ್ದಾರೆ. ಚಂದ್ರನ ಮೇಲೆ ಲ್ಯಾಂಡ್ ಆಗಿ ಸುಮಾರು 4 ಗಂಟೆ ನಂತರ ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಚಲಿಸುವವರೆಗೂ ಇದ್ದು ಮುಂಬೈನತ್ತ ಪ್ರಯಾಣ ಬೆಳೆಸಲಿದ್ದಾರೆ.