ವಿಜಯಪುರ, ಸೆ 06 (Daijiworld News/MSP): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಪ್ರಧಾನಿಯಾಗಿದ್ದು, ಅವರೊಬ್ಬ ಗ್ರೇಟ್ ಶೋಮ್ಯಾನ್ ಎಂದು ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ತಿಕೋಟದಲ್ಲಿ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ಎಂಬಿ ಪಾಟೀಲ್, ವಿದೇಶದಲ್ಲೇ ಇರುವ ಪ್ರಧಾನಿಗಳಿಗೆ ಉತ್ತರ ಕರ್ನಾಟಕದ ಪ್ರವಾಹದ ಬಗ್ಗೆಯಾಗಲಿ, ಇತರ ವಿಚಾರವಾಗಲಿ ಯಾವುದ್ರ ಬಗ್ಗೆಯೂ ಮಾಹಿತಿಯೂ ತಿಳಿದಿಲ್ಲ. ಅವರೊಬ್ಬ ಗ್ರೇಟ್ ಶೋಮ್ಯಾನ್ . ವಿದೇಶಕ್ಕಿಂತಲೂ ಹೆಚ್ಚಾಗಿ ಮೊದಲು ದೇಶದಲ್ಲಿ ಏನಾಗುತ್ತಿದೆ ? ರಾಜ್ಯದಲ್ಲಿನ ನೆರೆ ಪರಿಸ್ಥಿತಿ, ಜಿಡಿಪಿ ಕುಸಿತದ ಬಗ್ಗೆ ಎಳ್ಳಷ್ಟು ಮಾಹಿತಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೋದಿ ಭಾರತದ ಪ್ರಧಾನಿಯೇ ಎನ್ನುವ ಸಂಶಯ ಕಾಡುತ್ತಿದ್ದು ದೇಶದಲ್ಲಿರುವುದಕ್ಕಿಂತ ಹೆಚ್ಚಾಗಿ ವಿದೇಶದಲ್ಲೇ ಇರುವುದರಿಂದ ಅವರನ್ನು ವಿದೇಶಿ ಪ್ರಧಾನಿ ಎನ್ನಬಹುದು ಎಂದಿದ್ದಾರೆ.
ಅನರ್ಹ ಶಾಸಕರ ಕುರಿತು ಪ್ರತಿಕ್ರಿಯಿಸಿದ ಅವರು,ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿಯಬೇಕು. ಈ ಆದೇಶದಿಂದ ಮತ್ತೊಮ್ಮೆ ಇಂತಹ ಕೆಲಸಕ್ಕೆ ಬೇರೆ ಯಾವ ಶಾಸಕರು ಕೈ ಹಾಕುವುದಿಲ್ಲ.ಅನರ್ಹ ಶಾಸಕರಿಂದಾಗಿ 17 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಬೇಕಾಗಿದೆ. ಚುನಾವಣೆ ನಡೆದರೇ ಜನರ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಜನರ ದುಡ್ಡಿನಲ್ಲಿ ಚುನಾವಣೆ ಆಗುತ್ತದೆಯೇ ಹೊರತು ಅನರ್ಹ ಶಾಸಕರ ದುಡ್ಡಿನಲ್ಲಿ ಅಲ್ಲ ಎಂದರು.