ಬೆಂಗಳೂರು,ಸೆ 06 (Daijiworld News/RD): ಬಿಜೆಪಿಯು, ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ. ಕುತಂತ್ರಿಗಳಿಗೆ ಡಿಕೆಶಿ ತಾಯಿಯ ಕಣ್ಣೀರು ಶಾಪವಾಗಲಿದೆ. ವಿರೋಧಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳುವ ಸಂಪ್ರದಾಯ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಕುಮಾರಸ್ವಾಮಿ ಸರ್ಕಾರದ ವಿರುದ್ದ ಗುಡುಗಿದ್ದಾರೆ.
ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯವು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧಿಸಿದ್ದು, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿರುವ ನಿವಾಸಕ್ಕೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಭೇಟಿ ನೀಡಿ, ಮಗನ ಬಂಧನದ ನೋವಿನಲ್ಲಿರುವ ಡಿಕೆಶಿ ಅವರ ತಾಯಿ ಗೌರಮ್ಮ ಅವರಿಗೆ ಸಂತ್ವಾನದ ನುಡಿಗಳನ್ನಾಡಿದರು. ನೀವು ಎದೆಗುಂದದಿರಿ, ನಿಮ್ಮ ಮಗನಿಗೆ ಏನೂ ಆಗುವುದಿಲ್ಲ ಎಂದು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಡಿಕೆಶಿ ತಾಯಿ ಗೌರಮ್ಮ ಮಗನ ಸ್ಥಿತಿಯನ್ನು ನೆನೆದು ಕಣ್ಣೀರು ಹಾಕಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ, ಐಟಿ ಅಧಿಕಾರಿಗಳು ಬಿಜೆಪಿಯ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ, ಬಿಜೆಪಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ ಪಕ್ಷವನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿ ಶಾಸಕರನ್ನು ರಕ್ಷಣೆ ಮಾಡಿದ್ದರು. ಆ ವೇಳೆ ಡಿಕೆ ಶಿವಕುಮಾರ್ ಅವರಿಗೆ ಫೋನ್ ಕರೆ ಮಾಡಿದ್ದ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ ಅವರು ಪಕ್ಷದ ಕಾರ್ಯವನ್ನು ಮಾಡಿದ್ದರಿಂದ ಬಿಜೆಪಿಗೆ ರಾಜ್ಯಸಭೆಯ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿತ್ತು. ಅದಕ್ಕಾಗಿ ಅವರನ್ನುನೇರವಾಗಿ ಗುರಿಯಾಗಿಸಿಕೊಂಡು ಅವರನ್ನು ಬಂಧಿಸಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಇಡಿ, ಐಟಿ ಸಂಸ್ಥೆಗಳನ್ನು ಉಪಯೋಗಿಸಿ ದುರ್ಬಳಕೆ ಮಾಡುತ್ತಿದೆ ಎಂದರು.
2012 ಇಸವಿಯಲ್ಲಿ, ಕೇಂದ್ರ ಸರ್ಕಾರ ಯಾವ ರೀತಿಯಾಗಿ ಇಡಿ, ಸಿಬಿಐ ಸೇರಿದಂತೆ ಇತರ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಳ್ಳುತ್ತಾರೆ ಎಂಬುವುದರ ಬಗ್ಗೆ ಹಿರಿಯ ಐಎಎಸ್ ಅಧಿಕಾರಿ ವಿಠಾಲ್ ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಕೆಲವೊಂದು ಘಟನೆಗಳು ಇದೇ ರೀತಿಯಾಗಿ ಆಗುತ್ತಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.