ಬೆಂಗಳೂರು, ಸೆ.07(Daijiworld News/SS): ಮಹತ್ವಾಕಾಂಕ್ಷೆಯ ಚಂದ್ರಯಾನ-2 ತನ್ನ ಗುರಿಸಾಧನೆಯ ಅಂತಿಮ ಘಟ್ಟದಲ್ಲಿರುವಾಗಲೇ ಇಸ್ರೋಗೆ ಅಲ್ಪ ಹಿನ್ನಡೆಯಾಗಿದೆ. ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಪ್ರಕ್ರಿಯೆಯಲ್ಲಿ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದೆ ಎನ್ನಲಾಗಿದೆ.
ಸದ್ಯ ಇಸ್ರೋ ವಿಜ್ಞಾನಿಗಳು ಲ್ಯಾಂಡರ್ ಕಳುಹಿಸಿದ ದತ್ತಾಂಶವನ್ನು ವಿಶ್ಲೇಷಣೆ ಮಾಡುತ್ತಿದ್ದಾರೆ. 2.1 ಕಿ.ಮೀ. ವರೆಗೆ ಚಲಿಸಿದ ನಂತರ ಸಿಗ್ನಲ್ ಸ್ಥಗಿತವಾಗಿದೆ. ಈ ಕುರಿತು ದತ್ತಾಂಶ ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಕೆ. ಶಿವನ್ ಮಾಹಿತಿ ನೀಡಿದ್ದಾರೆ.
ವಿಕ್ರಮ್ ಲ್ಯಾಂಡರ್'ನ ಒಟ್ಟು ನಾಲ್ಕು ಎಂಜಿನ್'ಗಳನ್ನು ಉರಿಸುವ ಮೂಲಕ ಲ್ಯಾಂಡರ್ ಅನ್ನು ಸುರಕ್ಷಿತ ಲ್ಯಾಂಡಿಂಗ್ ಹಂತಕ್ಕೆ ತರಲಾಗಿತ್ತು. ಆದರೆ ಲ್ಯಾಂಡರ್ ಸುರಕ್ಷಿತ ಲ್ಯಾಂಡಿಂಗ್ ಹಂತದ ತಲುಪುತ್ತಿದ್ದಂತೆಯೇ ನೌಕೆಯ ಸಂಪರ್ಕ ಕಡಿತವಾಗಿದೆ ಎಂದು ತಿಳಿದುಬಂದಿದೆ.
ಸಂಪರ್ಕ ಕಡಿತಗೊಂಡಿರುವ ವಿಕ್ರಮ್ ಲ್ಯಾಂಡರ್ ಮತ್ತು ಅದರೊಳಗಿರುವ ಪ್ರಜ್ಞಾನ್ ರೋವರ್ ಕುರಿತು ಸ್ಥಿತಿಗತಿ ವರದಿಗಾಗಿ ವಿಜ್ಞಾನಿಗಳು ಸತತ ಪ್ರಯತ್ನ ನಡೆಸುತ್ತಿದ್ದು, ಮತ್ತೆ ಇಸ್ರೋ ವಿಜ್ಞಾನಿಗಳು ವಿಕ್ರಂ ಲ್ಯಾಂಡರ್'ನೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.