ಬೆಂಗಳೂರು, ಸೆ.07(Daijiworld News/SS): ದೇಶದ ಮಹತ್ವಾಕಾಂಕ್ಷಿ ಚಂದ್ರಯಾನ 2 ವಿಕ್ರಮ್ ಲ್ಯಾಂಡರ್ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ. ಇಡೀ ಇಸ್ರೋ ವಿಜ್ಞಾನಿಗಳ ತಂಡ ನಿರಾಶೆಯಲ್ಲಿದ್ದಾಗ "ಧೈರ್ಯವಾಗಿರಿ. ಜೀವನದಲ್ಲಿ ಏರಿಳಿತ ಸಾಮಾನ್ಯ" ಎಂದು ಹೇಳುವ ಮೂಲಕ ಪ್ರಧಾನಿ ವಿಜ್ಞಾನಿಗಳ ಕೆಲಸಕ್ಕೆ ಭೇಷ್ ಅಂದಿದ್ದಾರೆ.
ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಧೈರ್ಯ ತುಂಬಿ ಕೆ.ಶಿವನ್ ಅವರ ಬೆನ್ನು ತಟ್ಟಿದ ಪ್ರಧಾನಿ ಮೋದಿ ಬಳಿಕ ವಿಜ್ಞಾನಿಗಳೊಂದಿಗೆ ಮಾತನಾಡಿದರು. ನಿಮ್ಮ ಈ ಶ್ರಮ ದೇಶಕ್ಕೆ ಸಾಕಷ್ಟು ಪಾಠ ಕಲಿಸಿದೆ. ನನ್ನ ಕಡೆಯಿಂದ ನಿಮಗೆ ಶುಭ ಕೋರುತ್ತೇನೆ. ನೀವು ನಿಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದ್ದೀರಿ. ನಾನು ನಿಮ್ಮ ಬೆಂಬಲಕ್ಕೆ ನಿಂತಿದ್ದೇನೆ. ನಿಮ್ಮ ಬೆಂಬಲಕ್ಕೆ ಇಡೀ ದೇಶವಿದ್ದು, ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ. ನಾವು ಧೈರ್ಯದಿಂದ ಮುನ್ನಡೆಯೋಣ ಎಂದು ಹೇಳಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಗಳ ಜತೆ ಮೋದಿ ಸಂವಾದ ನಡೆಸಿದ ಅವರು, ಹಿಂದೆ ಆಗಿದ್ದನ್ನು ಮರೆತುಬಿಡಬೇಕು, ಮುಂದಿನ ಬಗ್ಗೆ ಚಿಂತಿಸಬೇಕು ಎಂದು ಪ್ರಧಾನಿ ಕಿವಿಮಾತು ಹೇಳಿದರು.
ಮಾತ್ರವಲ್ಲ, ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಮ್ಮ ವಿಜ್ಞಾನಿಗಳ ಬಗ್ಗೆ ನಮಗೆ ಅತೀವ ಹೆಮ್ಮೆ ಇದೆ. ಅವರು ಅತ್ಯುತ್ತಮವಾದದ್ದನ್ನು ನೀಡಿದ್ದಾರೆ ಮತ್ತು ಯಾವಾಗಲೂ ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ಏಳು-ಬೀಳು ಇದ್ದದ್ದೇ, ಇದೇನು ಕಡಿಮೆ ಸಾಧನೆಯಲ್ಲ ಎಂದು ಪ್ರಧಾನಿ ಮೋದಿ ವಿಜ್ಞಾನಿಗಳ ಬೆಂಬಲ ನೀಡಿದ್ದಾರೆ.