ನವದೆಹಲಿ, ಸೆ.07(Daijiworld News/SS): ಮತ್ತೆ ಪುಲ್ವಾಮಾ ಮಾದರಿ ದಾಳಿ ನಡೆಸಲು ಉಗ್ರರಿಗೆ ಪಾಕ್ ನೆರವು ನೀಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾತ್ರವಲ್ಲ, ಉತ್ತರ ಕಾಶ್ಮೀರದ ಗುರೆಜ್ ಮತ್ತು ಮಚ್ಲಿ ಸೆಕ್ಟೆರ್ ಮೂಲಕ ಭಾರತಕ್ಕೆ ಒಳನುಸುಳಲು 60ಕ್ಕೂ ಹೆಚ್ಚು ಉಗ್ರರು ಹೊಂಚು ಹಾಕಿದ್ದಾರೆ ಎನ್ನಲಾಗಿದೆ.
ಜಮ್ಮು- ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ನಂತರ ಕಾಶ್ಮೀರದಲ್ಲಿ ಉದ್ವಿಗ್ನ ಸನ್ನಿವೇಶವಿದೆ ಎಂದು ವಿಶ್ವ ಸಮುದಾಯಕ್ಕೆ ತೋರಿಸಲು ಪಾಕ್ ನಿರ್ಧರಿಸಿದೆ. ಇದಕ್ಕಾಗಿ ಪುಲ್ವಾಮಾ ಮಾದರಿ ದಾಳಿ ನಡೆಸಲು ಉಗ್ರರಿಗೆ ಪಾಕ್ ನೆರವು ನೀಡುತ್ತಿದೆ. ಗಡಿ ನಿಯಂತ್ರಣ ರೇಖೆ ಬಳಿ ಎರಡು ಸಾವಿರ ಸೈನಿಕರ ಜಮಾವಣೆ, ಉಗ್ರರ ಶಿಬಿರಗಳಲ್ಲಿ ಚಟುವಟಿಕೆ ಹೆಚ್ಚಳಕ್ಕೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಈಗ ಅಪಾರ ಪ್ರಮಾಣದ ಶಸ್ತ್ರಾಸ್ತ್ರವನ್ನು ಗಡಿ ಸಮೀಪ ಸಂಗ್ರಹಿಸುತ್ತಿದೆ ಎಂದು ತಿಳಿದುಬಂದಿದೆ.
ಪಿಒಕೆಯ ದೂದ್ಗಾಯ್, ದರ್ವತ್, ಲೋಸಾರ್, ತೌಬತ್ ಮತ್ತು ಸೋನಾರ್ ಲಾಂಚ್ಪ್ಯಾಡ್ಗಳಲ್ಲಿ ಉಗ್ರರು ಭಾರತಕ್ಕೆ ನುಗ್ಗಲು ಕಾಯುತ್ತಿದ್ದಾರೆ. ಪಾಕ್ನ ಗುಪ್ತಚರ ಸಂಸ್ಥೆ ಐಎಸ್ಐ ಉಗ್ರರ ಜತೆ ಕೈಜೋಡಿಸಿದೆ ಎನ್ನಲಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಸನಿಹಕ್ಕೆ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಸರಕು ಸಾಗಣೆದಾರರ ಮೂಲಕ ಸೆ. 1 ಮತ್ತು 2ರ ಮಧ್ಯರಾತ್ರಿಯಲ್ಲಿ ರವಾನಿಸಲಾಗಿದೆ. ಇದನ್ನು ಪಿಒಕೆಯ ರಾವಲಕೋಟ್ನ ರಾಖ್ ಚಕ್ರಿ ವಲಯದಲ್ಲಿ ಶೇಖರಿಸಿ ಇರಿಸಲಾಗಿದೆ. 10 ಬಲೂಚ್ ರೆಜಿಮೆಂಟನ್ನು ದಾಸ್ತಾನು ರಕ್ಷಣೆಗೆ ನಿಯೋಜಿಸಲಾಗಿದೆ. ಈ ಶಸ್ತ್ರಾಸ್ತ್ರವನ್ನು ಎಲ್ಒಸಿ ಬಳಿಯ ಶಿಬಿರಗಳಲ್ಲಿ ಭಾರತಕ್ಕೆ ನುಗ್ಗಲು ಕಾಯುತ್ತಿರುವ ಉಗ್ರರಿಗೆ ಪೂರೈಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.