ಮಡಿಕೇರಿ, ಸೆ.07(Daijiworld News/SS): ಕೊಡಗು ಜಿಲ್ಲೆಯಲ್ಲಿ ಮತ್ತೆ ವರುಣನ ಅಬ್ಬರ ಹೆಚ್ಚಾಗುವ ನಿರೀಕ್ಷೆ ಇದೆ. ಮುಂದಿನ 48 ಗಂಟೆಗಳಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚು ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆ ವರದಿ ಆಧರಿಸಿ ಕೊಡಗು ಜಿಲ್ಲೆಯಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ.
ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕಾಗಿರುವುದಾಗಿ ಹವಾಮಾನ ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ.
ಕೊಡಗು ಜಿಲ್ಲೆಯ ಭಾಗಮಂಡಲ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಕಳೆದ 24 ಗಂಟೆಗಳ್ಲಲಿ 260 ಮಿಮೀ ಮಳೆ ದಾಖಲಾಗಿದೆ. ಮಡಿಕೇರಿಯಲ್ಲಿ 115.60 ಮಿಮೀ, ಸಂಪಾಜೆ 135.40, ನಾಪೋಕ್ಲು 127.20 ಮಿಮೀ ಪೊನ್ನಂಪೇಟೆ 143.40, ಶಾಂತಳ್ಳಿಯಲ್ಲಿ 153 ಮಿಮೀ ಮಳೆಯಾಗಿದ್ದು, ಜಾಗ್ರತೆ ವಹಿಸುತವಂತೆ ಜಿಲ್ಲಾಡಳಿತ ಸೂಚಿಸಿದೆ. ತುರ್ತು ಪರಿಸ್ಥಿತಿ ತಲೆದೋರಿದಲ್ಲಿ ದೂರವಾಣಿ ಮುಖೇನ ಸಂಪರ್ಕಿಸುವಂತೆ ತಿಳಿಸಿದೆ.
ಈ ಮಧ್ಯೆ ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಬಿಡುತ್ತಿರುವುದರಿಂದ ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದೆ.