ನವದೆಹಲಿ, ಸೆ.07(Daijiworld News/SS): ಮಹತ್ವಾಕಾಂಕ್ಷೆಯ ಚಂದ್ರಯಾನ-2 ತನ್ನ ಗುರಿಸಾಧನೆಯ ಅಂತಿಮ ಘಟ್ಟದಲ್ಲಿರುವಾಗಲೇ ಇಸ್ರೋಗೆ ಅಲ್ಪ ಹಿನ್ನಡೆಯಾಗಿದೆ. ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಪ್ರಕ್ರಿಯೆಯಲ್ಲಿ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ನಮ್ಮ ವಿಜ್ಞಾನಿಗಳ ಸಾಧನೆ ಪ್ರತಿಯೊಬ್ಬ ಭಾರತಿಯರಿಗೂ ಸ್ಫೂರ್ತಿ ಎಂದು ಹೇಳಿದ್ದಾರೆ.
ಇಸ್ರೋ ವಿಜ್ಞಾನಿಗಳ ಕೆಲಸ ವ್ಯರ್ಥವಾಗಿಲ್ಲ ಎಂದು ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ನಿಂದ ಸಿಗ್ನಲ್ ಕಳೆದುಕೊಂಡ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಚಂದ್ರಯಾನ-2 ಮೂನ್ ಮಿಷನ್ನಲ್ಲಿ ಇಸ್ರೋ ತಂಡವು ಮಾಡಿದ ಅದ್ಭುತ ಕಾರ್ಯಕ್ಕಾಗಿ ಅಭಿನಂದನೆಗಳು. ನಿಮ್ಮ ಉತ್ಸಾಹ ಮತ್ತು ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ. ನಿಮ್ಮ ಕೆಲಸ ವ್ಯರ್ಥವಾಗಿಲ್ಲ. ನಿಮ್ಮ ಈ ಸಾಧನೆ ಭಾರತೀಯ ವೈಜ್ಞಾನಿಕ ಹಾದಿಗೆ ಮತ್ತು ಮುಂದಿನ ಭಾರತ ಕಾರ್ಯಚರಣೆಗೆ ಅಡಿಪಾಯವನ್ನು ಹಾಕಿದೆ ಎಂದು ಹೇಳಿದ್ದಾರೆ.
ಚಂದ್ರನ ಮೇಲೆ ಸುರಕ್ಷಿತ ಲ್ಯಾಂಡ್ ಆದ ವಿಶ್ವದ ನಾಲ್ಕನೇ ದೇಶ ಎಂಬುದರ ಜತೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆದ ಹಾಗೂ ಮೊದಲ ಪ್ರಯತ್ನದಲ್ಲೇ ಚಂದ್ರಯಾನ ಯಶಸ್ವಿಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿತ್ತು. ಆದರೆ ಕೊನೆಯ ಹಂತದಲ್ಲಿ ಲ್ಯಾಂಡರ್ ಸುರಕ್ಷಿತವಾಗಿ ಇಳಿಯಲು ಸಾಧ್ಯವಾಗದಿರುವುದರಿಂದ ಇಸ್ರೋ ವಿಜ್ಞಾನಿಗಳಿಗೆ ನಿರಾಸೆ ಉಂಟು ಮಾಡಿದೆ.