ನವದೆಹಲಿ, ಸೆ.07(Daijiworld News/SS): ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೂ ವಾಯುಗಡಿ ಬಳಕೆ ಮಾಡಲು ಅನುಮತಿ ನೀಡಲು ಪಾಕಿಸ್ತಾನ ಸರ್ಕಾರ ನಿರಾಕರಿಸಿದೆ.
ರಾಮನಾಥ ಕೋವಿಂದ ಅವರು ಸೋಮವಾರದಿಂದ ಐಸ್ಲೆಂಡ್, ಸ್ವಿಜರ್ಲೆಂಡ್ ಮತ್ತು ಸ್ಲೊವೇನಿಯಾ ರಾಷ್ಟ್ರಗಳ ಭೇಟಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಾಯುಪ್ರದೇಶ ಬಳಲು ಭಾರತ ಸರ್ಕಾರ ಪಾಕಿಸ್ತಾನದ ಅನುಮತಿ ಕೋರಿತ್ತು. ಆದರೆ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅನುಮತಿ ನೀಡದಿರಲು ನಿರ್ಧರಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು, ಭಾರತದ ಇತ್ತೀಚೆಗಿನ ನಡೆ ಅತ್ಯಂತ ಹೇಯವಾದದ್ದು. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಇಂತಹ ನಡೆ ಸಹಿಸಲಸಾಧ್ಯ. ಹೀಗಾಗಿ ಭಾರತಕ್ಕೆ ನಮ್ಮ ವಾಯುಗಡಿಯನ್ನು ಮುಚ್ಚಿದ್ದೇವೆ ಎಂದು ಹೇಳಿದ್ದಾರೆ.
ಈ ಹಿಂದೆ ಪುಲ್ವಾಮ ಉಗ್ರ ದಾಳಿ ಬಳಿಕ ಭಾರತ ನಡೆಸಿದ್ದ ಬಾಲಾಕೋಟ್ ವಾಯುದಾಳಿ ಬೆನ್ನಲ್ಲೇ ಪಾಕಿಸ್ತಾನ ತನ್ನ ವಾಯುಗಡಿಯನ್ನು ನಿರ್ಬಂಧಿಸಿತ್ತು. ಆ ನಂತರ ಜುಲೈ 16 ರಿಂದ ನಾಗರಿಕ ವಿಮಾನಗಳಿಗೆ ತನ್ನ ವಾಯು ಪ್ರದೇಶವನ್ನು ಬಳಸಲು ಅನುಮತಿ ನೀಡಿತ್ತು. ಬಳಿಕ ಆ.5 ರಂದು ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ, ಇದೀಗ ಮತ್ತೆ ವಾಯುಗಡಿಯನ್ನು ಭಾರತಕ್ಕೆ ಸಂಪೂರ್ಣ ನಿಷೇಧಿಸಿದೆ.