ಮೈಸೂರು, ಸೆ.07(Daijiworld News/SS): ರಾಜ್ಯ ಸರಕಾರವೂ ಬೇರೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಪಕ್ಕಕ್ಕಿಟ್ಟು, ನೆರೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಿ, ಆ ಕೆಲಸಗಳಲ್ಲಿ ನಿರತವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ನೆರೆ ಪರಿಹಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿಗೆ ನಿಯೋಗ ತೆರಳುವ ಬಗ್ಗೆ ಪರಾಮರ್ಶೆ ಮಾಡಿ ತೀರ್ಮಾನ ಕೈಗೊಳ್ಳುತ್ತೇನೆ. ರಾಜ್ಯದ ನೆರೆ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಸಹ ಈಗಾಗಲೆ ರಾಜ್ಯಕ್ಕೆ ಬಂದು ಪರಿಶೀಲನೆ ಮಾಡಿ ಹೋಗಿದ್ದಾರೆ. ಹಾಗಾಗಿ ಅವರಿಗೆ ರಾಜ್ಯದಲ್ಲಿನ ವಾಸ್ತವ ಪರಿಸ್ಥಿತಿ ತಿಳಿದಿದೆ ಎಂದು ಹೇಳಿದರು.
ಒಂದು ವೇಳೆ ಪರಿಹಾರ ಹಣ ನೀಡುವುದು ತಡವಾದಲ್ಲಿ ಮತ್ತೆ ಪ್ರಧಾನಿ ಬಳಿಗೆ ನಿಯೋಗ ತೆರಳುವ ಬಗ್ಗೆ ಪರಾಮರ್ಶೆ ಮಾಡಿ ತೀರ್ಮಾನ ಕೈಗೊಳ್ಳುತ್ತೇನೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಅನೇಕ ಸಂಕಷ್ಟಗಳು ಎದುರಾಗಿವೆ. ಒಂದು ಲಕ್ಷ ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಅವುಗಳನ್ನು ಪುನರ್ ನಿರ್ಮಿಸಬೇಕಿದೆ ಎಂದು ತಿಳಿಸಿದರು.