ಹೊಸದಿಲ್ಲಿ,ಸೆ 08 (Daijiworld News/RD): ಖ್ಯಾತ ಹಿರಿಯ ವಕೀಲ ಮತ್ತು ಕೇಂದ್ರದ ಮಾಜಿ ಕಾನೂನು ಸಚಿವ ರಾಮ್ ಜೇಠ್ಮಲಾನಿ (95) ಅವರು ಭಾನುವಾರ ಮುಂಜಾನೆ ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಕಳೆದ ಎರಡು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಹೊಸದೆಹಲಿಯ ಮನೆಯಲ್ಲಿ ಕೊನೆಯುಸಿರೆಳೆದರು.
1923 ಸೆಪ್ಟೆಂಬರ್ 14ರಂದು ಸಿಂಧ್ ಪ್ರಾಂತ್ಯದ ಸಿಖಾರ್ಪುರ್ ಗ್ರಾಮದಲ್ಲಿ ಜನಸಿದ ರಾಮ್ ಬೂಲ್ಚಂದ್ ಜೇಠ್ಮಲಾನಿ ಅವರು ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. 1959ರಲ್ಲಿ ಕೆ ಎಂ ನಾನಾವತಿ/ಸ್ಟೇಟ್ ಆಫ್ ಮಹಾರಾಷ್ಟ್ರ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಾದಿಸಿದ್ದರು.
ಇನ್ನು 2011ರಲ್ಲಿ ಮದ್ರಾಸ್ ಹೈಕೋರ್ಟ್ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕನ ಪರ ವಾದಿಸಿದ್ದ ಜೇಠ್ಮಲಾನಿ, ಷೇರು ಮಾರುಕಟ್ಟೆ ಹಗರಣದ ಆರೋಪಿ ಹರ್ಷದ್ ಮೆಹ್ತಾ ಮತ್ತು ಕೇತನ್ ಪರೇಖ್ ಪರ ವಕಾಲತ್ತು ವಹಿಸಿದ್ದರು. ಅಷ್ಟೆ ಅಲ್ಲದೆ, ಭಯೋತ್ಪಾದಕ ಅಫ್ಜಲ್ ಗುರುವಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷಿಯನ್ನು ಸಮರ್ಥಿಸಿಕೊಂಡಿದ್ದರು.
ಜೇಠ್ಮಲಾನಿ ಎರಡು ಬಾರಿ ಮುಂಬಯಿಂದ ಲೋಕಸಭೆಯಲ್ಲಿ ಸ್ಪರ್ಧಿಸಿದ್ದು, ಅಟಲ್ ಬಿಹಾರಿ ವಾಜಪೇಯಿ ಅಧಿಕಾರಾವಧಿಯಲ್ಲಿ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ 2004ರಲ್ಲಿ ಲಕ್ನೋ ಕ್ಷೇತ್ರದಿಂದ ವಾಜಪೇಯಿ ವಿರುದ್ಧವೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
2010 ರಲ್ಲಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷರಾಗಿ ನೇಮಕವಾಗಿದ್ದ ರಾಮ್ ಜೇಠ್ಮಲಾನಿ ಅವರು, ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಗಳಲ್ಲಿ ಹಲವು ಮಹತ್ತರ ಪ್ರಕರಣಗಳಲ್ಲಿ ವಾದಿಸುವ ಮೂಲಕ ಕಾನೂನು ಕ್ಷೇತ್ರದಲ್ಲಿ ಇವರು ಗಮನಸೆಳೆದಿದ್ದರು.