ಬೆಂಗಳೂರು, ಸೆ 08 (Daijiworld News/RD): ಪ್ರತಿ ವರ್ಷ ದಸರಾ ರಜೆಗೂ ಮೊದಲೇ ಮಧ್ಯ ವಾರ್ಷಿಕ ಪರೀಕ್ಷೆ ನಡೆಸಿ ಬಳಿಕ ರಜೆ ಇರುತ್ತಿತ್ತು. ಆದರೆ ಈ ಬಾರಿ ರಜೆಯ ಬಳಿಕವೇ ಮಧ್ಯವಾರ್ಷಿಕ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ.
ಈ ವರ್ಷದ ದಸರಾ ರಜೆ ಸೆ. 28 ರಿಂದ ಅ. 13ರ ತನಕ ಇರಲಿದೆ. ಮಳೆ, ಪ್ರವಾಹದಿಂದ ಹಲವು ದಿನ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿರುವುದರಿಂದ ಕೆಲವೊಂದು ಜಿಲ್ಲೆಗಳಲ್ಲಿ ಈ ಅವಧಿಯಲ್ಲೂ ವಿಶೇಷ ತರಗತಿ ನಡೆಸುವ ಸಾಧ್ಯತೆಯೂ ಇರಲಿದೆ. ಅ.14ರಿಂದ ಇಲಾಖೆಯ ಎರಡನೇ ಅರ್ಧ ಭಾಗದ ಶೈಕ್ಷಣಿಕ ಚಟುವಟಿಕೆ ಆರಂಭವಾಗಲಿದೆ. 2019-20ನೇ ಸಾಲಿನ ಶೈಕ್ಷಣಿಕ ಅವಧಿಯು 2020ರ ಎ.20ಕ್ಕೆ ಕೊನೆಗೊಂಡು, ಎ.20ರಿಂದ ಬೇಸಿಗೆ ರಜೆ ಆರಂಭವಾಗಲಿದೆ. ಇದರ ಜತೆಗೆ ಪ್ರತಿ ವರ್ಷ ಸುಮಾರು 17 ದಿನಗಳ ದಸರಾ ರಜೆ ನೀಡಲಾಗುತ್ತದೆ. ದಸರಾ ರಜೆಗೂ ಮೊದಲೇ ಒಂದು ಕಿರು ಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆ ಪೂರೈಸಿಕೊಳ್ಳಲಾಗುತ್ತದೆ. ಇಲ್ಲಿಗೆ ಮೊದಲಾರ್ಧದ ಬಹುತೇಕ ಪಠ್ಯಗಳು ಪೂರ್ಣಗೊಂಡಿರುತ್ತವೆ. ರಜೆ ಮುಗಿಸಿ ಬರುವ ವಿದ್ಯಾರ್ಥಿಗಳಿಗೆ ಪಠ್ಯದ ಎರಡನೇ ಅರ್ಧದ ಬೋಧನೆ ಮತ್ತು ಎರಡನೇ ಕಿರು ಪರೀಕ್ಷೆ ನಡೆಸಲಾಗುತ್ತದೆ. ಹೀಗಾಗಿ ರಜಾ ದಿನದಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕಾದ ಅವಶ್ಯಕತೆ ಇರುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಪೂರ್ವ ನಿಯೋಜಿತ ಮಾರ್ಗಸೂಚಿಯಂತೆ ರಜೆಯ ಅನಂತರ ಮಧ್ಯವಾರ್ಷಿಕ ಪರೀಕ್ಷೆ ನಡೆಸಲು ಸೂಚನೆ ನೀಡಿದ್ದೇವೆ. ಬಹುತೇಕ ಜಿಲ್ಲೆಗಳು ಇದಕ್ಕಾಗಿ ವೇಳಾಪಟ್ಟಿ ಯನ್ನು ಸಿದ್ಧಪಡಿಸಿಕೊಂಡಿವೆ. ವಿದ್ಯಾರ್ಥಿಗಳಿಗೆ ಇದರಿಂದ ಯಾವುದೇ ಸಮಸ್ಯೆ ಆಗುವುದುದಿಲ್ಲ ಎಂದು ಪಿಯು ಇಲಾಖೆಯ ಪ್ರಭಾರ ನಿರ್ದೇಶಕ ಅಸಾದುಲ್ಲಾ ಖಾನ್ ತಿಳಿಸಿದ್ದಾರೆ.
ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರಿಲ್ಲ, ಪ್ರಾಂಶುಪಾಲರಿಲ್ಲ, ಜೊತೆಗೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅವಕಾಶ ನೀಡುತ್ತಿಲ್ಲ ಇಷ್ಟಲ್ಲಾ ಸಮಸ್ಯೆ ಇರುವುದರಿಂದ, ಇದರ ಪರಿಣಾಮ ಮಧ್ಯವಾರ್ಷಿಕ ಪರೀಕ್ಷೆ ಮೇಲೆ ಬಿದ್ದಿರಬಹುದು ಎಂದು ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅಭಿಪ್ರಾಯಪಟ್ಟರು.