ಮುಂಬೈ, ಜು. 07 (DaijiworldNews/TA): ಮುಂಬೈನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆ ಮತ್ತು ಬಿರುಗಾಳಿಯ ಪರಿಣಾಮ ನಗರದಲ್ಲಿ 1,100ಕ್ಕೂ ಹೆಚ್ಚು ಮರಗಳು ಉರುಳಿಬಿದ್ದಿದ್ದು, ಮೂವರು ಮೃತಪಟ್ಟಿದ್ದಾರೆ. ಹಲವು ವಾಹನಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿಯಾಗಿದೆ.

ಜುಲೈ 6ರಂದು ಒಂದೇ ದಿನದಲ್ಲಿ 523 ಮರಗಳು ಧರೆಗುರುಳಿದ್ದು, ಈ ಮಳೆಗಾಲದಲ್ಲಿ 24 ಗಂಟೆಗಳ ಅವಧಿಯಲ್ಲಿ ದಾಖಲಾಗಿರುವ ಅತಿ ಹೆಚ್ಚು ಮರ ಉರುಳಿದ ಘಟನೆಗಳಾಗಿವೆ. ಗೋರೆಗಾಂವ್, ಕುರ್ಲಾ, ಮಾತುಂಗಾ ಹಾಗೂ ದಾದರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಹಾನಿ ಸಂಭವಿಸಿದೆ.
ಮರ ಉರುಳಿ ಮೃತಪಟ್ಟವರಲ್ಲಿ 11 ವರ್ಷದ ವಿಹಾನ್ ಶ್ರೀವಾಸ್ತವ್ ಕೂಡ ಸೇರಿದ್ದಾನೆ. ಜೂನ್ 30ರಂದು ಚೆಂಬೂರಿನ ರಸ್ತೆ ಸಂಖ್ಯೆ 11ರ ಹೆರಿಟೇಜ್ ಪ್ರೈಡ್ ಸಮೀಪ ಮಧ್ಯಾಹ್ನ ಶಾಲಾ ಬಸ್ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ರಸ್ತೆ ಬದಿಯ ಮರ ಬುಡಮೇಲಾಗಿ ಬಸ್ ಮೇಲೆ ಬಿದ್ದಿತ್ತು. ಘಟನೆಯಲ್ಲಿ ವಿಹಾನ್ ತಲೆ ಮತ್ತು ಹೊಟ್ಟೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದೇ ಘಟನೆಯಲ್ಲಿ ಇನ್ನೂ ನಾಲ್ವರು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.
ಈ ಮರ ಅಪಾಯಕಾರಿಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಹಲವು ಬಾರಿ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ಆರೋಪಿಸಲಾಗಿದೆ. ರಸ್ತೆ ಕಾಮಗಾರಿಯ ವೇಳೆ ಮರದ ಬೇರುಗಳಿಗೆ ಹಾನಿಯಾಗಿರುವುದರಿಂದ ಮಳೆಗಾಲದಲ್ಲಿ ಅದು ಕುಸಿಯುವ ಸಾಧ್ಯತೆ ಇದೆ ಎಂದು ಆಂತರಿಕ ವರದಿಯಲ್ಲಿಯೂ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ. ಘಟನೆಯ ಬಳಿಕ ಬಿಎಂಸಿ ತೋಟಗಾರಿಕೆ ಇಲಾಖೆಯ ಅಧಿಕಾರಿಯನ್ನು ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಿದೆ.
ಈ ವಾರ ಮರ ಉರುಳಿದ ಪರಿಣಾಮ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಜುಲೈ 5ರಂದು ಆರೆ ಕಾಲೋನಿಯಲ್ಲಿ 18 ವರ್ಷದ ಹಸನ್ ರಜಾ ಜಹಾಂಗೀರ್ ಆಲಂ ಸೈಯದ್ ಅವರು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಮರದ ಕೊಂಬೆ ಬಿದ್ದು ಮೃತಪಟ್ಟಿದ್ದರು. ಜುಲೈ 6ರಂದು ಕುರ್ಲಾ ಪಶ್ಚಿಮದಲ್ಲಿ 63 ವರ್ಷದ ಯೂನಸ್ ಕುಂಡವಾಲಾ ಅವರು ಅಂಗಡಿಯ ಮೇಲೆ ಮರ ಬಿದ್ದ ಪರಿಣಾಮ ಸಾವನ್ನಪ್ಪಿದ್ದರು.
ಯೂನಸ್ ಕುಂಡವಾಲಾ ಅವರ ಕುಟುಂಬಕ್ಕೆ ಬಿಎಂಸಿ ರೂ. 5 ಲಕ್ಷ ಪರಿಹಾರ ಘೋಷಿಸಿದ್ದು, ನಿರಂತರ ಮಳೆಯ ಹಿನ್ನೆಲೆಯಲ್ಲಿ ಅಪಾಯಕಾರಿ ಮರಗಳ ಪರಿಶೀಲನೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.