ಬೆಂಗಳೂರು, ಸೆ.08(Daijiworld News/SS): ಬಹು ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಲ್ಯಾಂಡರ್ ‘ವಿಕ್ರಮ್’ ಜತೆ ಇಸ್ರೊ ವಿಜ್ಞಾನಿಗಳಿಗೆ ಇನ್ನೂ ಸಂಪರ್ಕ ಪಡೆಯಲು ಸಾಧ್ಯವಾಗಿಲ್ಲ.
ಸೆ.7ರಂದು ಮುಂಜಾನೆ ವೇಳೆ 1.30ರಿಂದ 2.30ರ ಒಳಗೆ ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಂ ಲ್ಯಾಂಡರ್ ಇಳಿಯಬೇಕಿತ್ತು. ಹಾಗೇ ಲ್ಯಾಂಡರ್ ಕೊಂಡೊಯ್ದಿದ್ದ ಪ್ರಜ್ಞಾನ್ ರೋವರ್ ಮುಂಜಾನೆ 5.30-6.30ರೊಳಗೆ ಲ್ಯಾಂಡರ್'ನಿಂದ ಬೇರ್ಪಟ್ಟು ಚಂದ್ರನನ್ನು ಸ್ಪರ್ಶಿಸುತ್ತಿತ್ತು. ಆದರೆ, ಕೊನೇ ಕ್ಷಣದಲ್ಲಿ ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡು ಸಣ್ಣ ನಿರಾಶೆಯನ್ನುಂಟು ಮಾಡಿತ್ತು. ಲ್ಯಾಂಡರ್ ವಿಕ್ರಂ ಇನ್ನೇನು ಚಂದ್ರದಲ್ಲಿ ಇಳಿಯಬೇಕು ಎನ್ನುವಷ್ಟರಲ್ಲಿ ಸಂಪರ್ಕ ಕಡಿದುಕೊಂಡಿತು. ಈ ಘಟನೆ ಭಾರತೀಯರಲ್ಲಿ ತಾತ್ಕಾಲಿಕ ನಿರಾಶೆ ಉಂಟುಮಾಡಿತ್ತು.
ಚಂದ್ರಯಾನ 2 ಲ್ಯಾಂಡರ್ ಜೊತೆ ಮತ್ತೆ ಸಂಪರ್ಕ ಸಾಧಿಸಲು ಮುಂದಿನ 14 ದಿನಗಳ ಕಾಲ ನಿರಂತರ ಪ್ರಯತ್ನ ಮಾಡುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ.ಶಿವನ್ ಅವರು ಭರವಸೆ ನೀಡಿದ್ದಾರೆ.
ಈ ನಡುವೆ ಕೋಟ್ಯಂತರ ಭಾರತೀಯರಲ್ಲಿ ಹೆಮ್ಮೆಯ ಭಾವನೆ ಮೂಡಿಸಿದ್ದ ಚಂದ್ರಯಾನ 2 ಯೋಜನೆಯ ವಿಕ್ರಮ್ ಲ್ಯಾಂಡರ್ ಅಪಘಾತಕ್ಕೀಡಾಗಿಲ್ಲ. ವಿಕ್ರಮ್ ಲ್ಯಾಂಡರ್ ಮತ್ತು ಚಂದ್ರಯಾನ-2 ಆರ್ಬಿಟರ್ ನಡುವಿನ ಸಂಪರ್ಕ ಇನ್ನೂ ಜೀವಂತವಾಗಿದೆ ಎಂದು ಹೇಳಲಾಗಿದೆ. ಈ ಕುರಿತಂತೆ ಸ್ವತಃ ಇಸ್ರೋ ಮಾಜಿ ನಿರ್ದೇಶಕ ಡಿ ಸಸಿಕುಮಾರ್ ಅವರು ಅಚ್ಚರಿ ಹೇಳಿಕೆ ನೀಡಿದ್ದು, 'ಚಂದ್ರಯಾನ-2 ಸಂಪೂರ್ಣವಾಗಿ ಗುರಿ ಮುಟ್ಟಿರದೇ ಇರಬಹುದು. ಆದರೆ ವಿಫಲವಾಗಿಲ್ಲ. ಚಂದ್ರನಿಂದ 2.1 ಕಿ.ಮೀ. ದೂರದಲ್ಲಿ ಇದ್ದಾಗ ವಿಕ್ರಂ ಲ್ಯಾಂಡರ್ ನೆಟ್ವರ್ಕ್ ಸಂಪರ್ಕ ಕಡಿತಗೊಂಡಿದೆ. ಆದರೆ, ಇದರಿಂದ ನಿರಾಶೆಗೊಳ್ಳಬೇಕಿಲ್ಲ ಎಂದು ಹೇಳಿದ್ದಾರೆ.