ನವದೆಹಲಿ, ಜು. 07 (DaijiworldNews/AA): ಮುಕ್ತ ವ್ಯಾಪಾರ ಒಪ್ಪಂದಗಳ ಮೂಲಕ ಭಾರತದ ಚರ್ಮ ಮತ್ತು ಪಾದರಕ್ಷೆ ವಲಯದ ಮಾರುಕಟ್ಟೆ, 38 ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿಸ್ತರಣೆಗೊಂಡಿದ್ದು, ಇದರಿಂದ ರಫ್ತು ವಹಿವಾಟು ಗಣನೀಯ ಪ್ರಮಾಣದಲ್ಲಿ ಅಂದರೆ 4.5 ಬಿಲಿಯನ್ ಡಾಲರ್ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಸಮಾರಂಭವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಇದೀಗ ಭಾರತದ ಉತ್ಪನ್ನಗಳು ಯುಕೆ, ಒಮನ್, ಯುಎಇ ಸೇರಿದಂತೆ ಹಲವು ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಈಕ್ವೆಡಾರ್ ಸೇರಿದಂತೆ ಹಲವು ರಾಷ್ಟ್ರಗಳು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾಗಿದ್ದು, ಇದರಿಂದ ಭಾರತೀಯ ರಫ್ತುದಾರರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ" ಎಂದರು.
ರಪ್ತು ಉತ್ಪನ್ನಗಳನ್ನು ವೈವಿಧ್ಯಮಯಗೊಳಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ ಅವರು, "ಸದ್ಯ ಭಾರತದ ಚರ್ಮ ಉತ್ಪನ್ನಗಳು ಶೇಕಡ 77ರಷ್ಟು, ಕೇವಲ 15 ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಹಾಗಾಗಿ, ರಫ್ತುದಾರರು ಇತರೆ ದೇಶಗಳಿಗೂ ತಮ್ಮ ಉತ್ಪನ್ನಗಳ ವಿಸ್ತರಣೆಗೆ ಮುಂದಾಗಬೇಕು. ಅಲ್ಲದೆ, ಪಾದರಕ್ಷೆಗಳು, ಬ್ಯಾಗ್, ವ್ಯಾಲೆಟ್, ಜಾಕೆಟ್ ಹೊರತುಪಡಿಸಿ, ಇತರೆ ಉತ್ಪನ್ನಗಳ ತಯಾರಿಕೆಗೆ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಹೇಳಿದರು.