ಬಿಹಾರ, ಜು. 08 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಒಂದಾಗಿದ್ದು, ಈ ಪರೀಕ್ಷೆಯನ್ನು ಒಂದು ಬಾರಿ ಉತ್ತೀರ್ಣರಾಗುವುದೇ ಕಷ್ಟಸಾಧ್ಯ. ಆದರೆ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ 8ನೇ ರ್ಯಾಂಕ್ ಪಡೆದ ಪಕ್ಷಾಲ್ ಸೆಕ್ರೆಟರಿ ಅವರ ಯಶೋಗಾಥೆ ಇದು.

ಬಿಹಾರದ ಬಾಗ್ನಲ್ಲಿ ಜನಿಸಿದ ಪಕ್ಷಾಲ್, ನಂತರ ತಮ್ಮ ಶೈಕ್ಷಣಿಕ ಉನ್ನತಿಗಾಗಿ ಮತ್ತು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಲು ನವದೆಹಲಿಗೆ ತೆರಳಿದರು. ಪಕ್ಷಾಲ್ ಅವರು ಪ್ರತಿಷ್ಠಿತ ಐಐಟಿ ಕಾನ್ಪುರದಿಂದ ವಿಜ್ಞಾನದಲ್ಲಿ ಪದವಿ ಪೂರೈಸಿದ್ದಾರೆ. ಅಲ್ಲಿ ಅವರು ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೆ, ಸಂಶೋಧನೆ ಮತ್ತು ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದರು.
ಐಐಟಿ ಕಾನ್ಪುರದಲ್ಲಿ ವ್ಯಾಸಂಗ ಮಾಡುವಾಗ, 'ಸಮಾಜ ಸೇವೆಯಲ್ಲಿನ ಉತ್ಕೃಷ್ಟತೆಗಾಗಿ' ಅವರು 'ಡೈರೆಕ್ಟರ್ಸ್ ಗೋಲ್ಡ್ ಮೆಡಲ್' ಪಡೆದಿದ್ದರು. ಅಲ್ಲದೆ, ಅರ್ಥಶಾಸ್ತ್ರ ಮತ್ತು ಸಾರ್ವಜನಿಕ ನೀತಿಯಲ್ಲಿನ ಆಸಕ್ತಿಯಿಂದಾಗಿ, "ನ್ಯೂ-ನ್ಯೂ ಟ್ರೇಡ್ ಥಿಯರಿ ಆಫ್ ಇಂಟರ್ನ್ಯಾಷನಲ್ ಟ್ರೇಡ್" ಎಂಬ ಅವರ ಸಂಶೋಧನಾ ಪ್ರಬಂಧಕ್ಕೆ 'ಅತ್ಯುತ್ತಮ ಪ್ರಬಂಧ ಪ್ರಶಸ್ತಿ' ದೊರೆತಿತ್ತು.
ಪಕ್ಷಾಲ್ ಅವರು 2023 ರಿಂದ 2025 ರ ನಡುವೆ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದಾರೆ. ತಮ್ಮ ಆರಂಭಿಕ ಪ್ರಯತ್ನಗಳಲ್ಲಿ ವಿಫಲರಾದಾಗಲೂ ಧೃತಿಗೆಡದೆ, ತಮ್ಮ ಪ್ರಯತ್ನವನ್ನು ಮುಂದುವರೆಸಿದರು.
2025ರಲ್ಲಿ ಮೂರನೇ ಬಾರಿಗೆ ಪಕ್ಷಾಲ್ ಅವರು ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 8ನೇ ಅಖಿಲ ಭಾರತ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.