ಬೆಳಗಾವಿ, ಸೆ 08 (Daijiworld News/RD): ರಾಜ್ಯ ಸರ್ಕಾರ ಈಗ ಕೊಡುತ್ತಿರುವ ಪರಿಹಾರವೇ ಹೆಚ್ಚಾಗಿದ್ದು, ಇದಕ್ಕಿಂತ ಹೆಚ್ಚು ಕೊಡಲು ಸಾಧ್ಯವಿಲ್ಲ ಎಂದ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ್ದು, ರಾಜ್ಯದೆಲ್ಲೆಡೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷ್ಣಾ ನದಿ ಪ್ರವಾಹ ಪೀಡಿತ ಸಂತ್ರಸ್ತರು ಹೆಚ್ಚಿನ ಪರಿಹಾರಕ್ಕಾಗಿ ಸಚಿವರಲ್ಲಿ ಮನವಿ ಮಾಡಿದಾಗ, ಇದಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಅವರು, ಸುಮ್ಮನೆ ಹೋಗಿ. ಈಗಾಗಲೇ ನಾವು ರೂ.10,000 ಪರಿಹಾರವನ್ನು ನೀಡಿದ್ದೇವೆ. ಇದೇ ಹೆಚ್ಚಾಗಿದ್ದು, ಇದಕ್ಕಿಂತಲೂ ಹೆಚ್ಚು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಸಚಿವ ಈ ಮಾತಿನ ವರ್ಚಸ್ಸಿಗೆ ನೆರೆ ಸಂತ್ರಸ್ಥರು ಬೇಸರಗೊಂಡಿದ್ದು, ಸಚಿವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಸ್ಥಳಕ್ಕೆ ಅಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಈಗಾಗಲೇ ಮಾಜಿ ಸಿಎಂ ಸಿದ್ಧರಾಮಯ್ಯ ಈ ಬಗ್ಗೆ ಪ್ರತಿಕ್ರಿಯಿಸಿದ್ದು,''ನೆರೆ ಸಂತ್ರಸ್ತರಿಗೆ 10 ಸಾವಿರ ಕೊಟ್ಟಿದ್ದೇ ದೊಡ್ಡದು ಎಂಬಂತೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹಗುರವಾಗಿ ಹೇಳಿದ್ದು, ಇದು ಅವರ ಪೆದ್ದು ತನವನ್ನು ಬಿಂಬಿಸುತ್ತದೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದೇ ವ್ಯರ್ಥ'' ಎಂದರು.