ಬೆಂಗಳೂರು,ಸೆ 08 (Daijiworld News/RD): ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಿದ್ದರೂ ಕೂಡ ಅವರನ್ನು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಕರೆದೊಯ್ಯಲು ಮುಖ್ಯಮಂತ್ರಿ ಬಿಎಸ್ ವೈ ಅವರಿಗೆ ಸಾಧ್ಯವಾಗಲಿಲ್ಲ. ಇಂತಹ ದುರ್ಬಲ ಮುಖ್ಯಮಂತ್ರಿ ಪಡೆದಿದ್ದು ನಮ್ಮ ರಾಜ್ಯದ ದುರ್ದೈವ ಎಂದು ಸಿಎಂ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ’ರಾಜ್ಯದಲ್ಲಿ ನೆರೆ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ. ಪ್ರಧಾನಿಗಳು ಬೆಂಗಳೂರಿಗೆ ಬಂದರೂ ಅವರನ್ನು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಕರೆದೊಯ್ಯಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಕೇಂದ್ರ ಸರ್ಕಾರದಿಂದ ಪರಿಹಾರ ಧನವನ್ನು ಗಟ್ಟಿ ಧ್ವನಿಯಲ್ಲಿ ಕೇಳಲು ಸಾಧ್ಯವಾಗದಷ್ಟು ಮುಖ್ಯಮಂತ್ರಿಗಳು ದುರ್ಬಲರಾಗಿರೋದು ನಮ್ಮ ರಾಜ್ಯದ ದುರ್ದೈವ.’ ಎಂದು ಟ್ವೀಟ್ ಮಾಡುವ ಮೂಲಕ ಬಿಎಸ್ ವೈ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚಂದ್ರಯಾನ 2, ವೀಕ್ಷಿಸಲು, ಬೆಂಗಳೂರಿಗೆ ಪ್ರಧಾನಿ ಅವರು ಬಂದು ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದು ಸ್ವಾಗತಾರ್ಹ. ಆದರೆ, ನೆರೆಯಿಂದ ತತ್ತರಿಸಿ ಬೀದಿಗೆ ಬಿದ್ದಿರುವ ಸಾವಿರಾರು ಕುಟುಂಬಗಳು, ಮಕ್ಕಳನ್ನು ತಿರುಗಿಯೂ ನೋಡದೆ, ಕೇಂದ್ರದಿಂದ ಯಾವುದೇ ಪರಿಹಾರವನ್ನೂ ಘೋಷಿಸದೆ ಹಾಗೆಯೇ ತೆರಳಿದ್ದು ನೋವಿನ ವಿಚಾರ ಎಂದು ಹೇಳಿದರು.
ಸಿಎಂ ಬೆಂಗಳೂರು ನಗರದ ಪ್ರದಕ್ಷಿಣೆಗೆ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದ್ದು, 'ಸಿಎಂ ಯಡಿಯೂರಪ್ಪ ನೆರೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಬೀದಿಗೆ ಬಿದ್ದಿರೋ ಬಡ ಕುಟುಂಬಗಳೋಂದಿಗೆ ಕುಳಿತು ಪರಿಹಾರ ಕಾರ್ಯಗಳ ಬಗ್ಗೆ ಪರೀಶೀಲನೆ ಮಾಡಬೇಕಾದ ಸಂದರ್ಭದಲ್ಲಿ ಬೆಂಗಳೂರು ನಗರ ಪರಿವೀಕ್ಷಣೆ ಎಂಬ ನಾಟಕವಾಡುತ್ತಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.
ಪ್ರವಾಹದಿಂದಾಗಿ ರಾಜ್ಯದ ಹಲವು ಪ್ರದೇಶಗಳು ತತ್ತರಿಸಿ ಹೋಗಿದ್ದು, ಪ್ರಧಾನಿ ಬೆಂಗಳೂರಿಗೆ ಬಂದರು ಕೂಡ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದೇ ಇರುವುದು ಮತ್ತು ಯಾವುದೇ ಪರಿಹಾರ ಕ್ರಮ ಕೈಗೊಳ್ಳದೇ ಇರುವುದನ್ನು ಜೆಡಿಎಸ್ ಹಾಗೂ ಕಾಂಗ್ರೇಸ್ ಕಟುವಾಗಿ ಟೀಕಿಸಿದೆ.