ಬೆಂಗಳೂರು,ಸೆ 08 (Daijiworld News/RD): ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದರ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗಂಭೀರವಾಗಿ ಆರೋಪಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ದ್ವೇಷದಿಂದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರು ರಾಜ್ಯ ಸರ್ಕಾರ ವಿರುದ್ದ ಆರೋಪ ಹೊರಿಸುತ್ತಿದ್ದು, ಈ ಆರೋಪ ಸುಳ್ಳು ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಡಿಕೆಶಿ ಅವರನ್ನು ಬಂಧಿಸಲು ಸಿದ್ದರಾಮಯ್ಯ ಅವರೇ ಕಾರಣ ಎಂದರು. ಈ ಬಗ್ಗೆ ನಮಗೆ ಸಿದ್ದರಾಮಯ್ಯ ಮೇಲೆ ಸಂಶಯ ಇದ್ದು, ಡಿಕೆಶಿ ಬೆಳೆಯುತ್ತಾರೆಂದು ಅವರನ್ನು ಮಟ್ಟ ಹಾಕಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಲೇ ಇದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷ ಒಳಗೊಳಗೆ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಟೀಲ್ ಆರೋಪಿಸಿದ್ದಾರೆ.
2017ರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವಾಗ ಐಟಿ ದಾಳಿ ನಡೆಯಿತು. ಆಗ ಡಿಕೆಶಿ ಮನೆ ಮೇಲೆ ಕೂಡ ಐಟಿ ದಾಳಿ ನಡೆಸಿತ್ತು. ಆಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು. ತಮ್ಮ ಪಕ್ಷದ ನಾಯಕನ ವಿರುದ್ಧ ಆರೋಪ ಬಂದಾಗ ಸಿದ್ದರಾಮಯ್ಯ ನಿಲ್ಲಿಸಬಹುದಿತ್ತು ಆದರೆ ಅವರು ನಿಲ್ಲಿಸಲಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ನವರಿಗೆ ತಮ್ಮ ತಪ್ಪು ಮುಚ್ಚಿಹಾಕಿಕೊಳ್ಳಬೇಕಾಗಿದೆ. ಹೀಗಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ಯಾವುದೇ ರಾಜಕೀಯ ದ್ವೇಷವಿಲ್ಲ. ದ್ವೇಷವಿದ್ರೆ ಚುನಾವಣೆ ಮುಂಚೆ ಮಾಡಬಹುದಿತ್ತು ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.