ಬೆಂಗಳೂರು, ಸೆ.08(Daijiworld News/SS): ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಕಾನೂನು ಅಕ್ಷರಶಃ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಶಾಕ್ ನೀಡಿದ್ದು, ವಾಹನದ ಮೌಲ್ಯಕ್ಕಿಂತಲೂ ದಂಡದ ಪ್ರಮಾಣವೇ ಹೆಚ್ಚಾಗಿದೆ. ಇದೀಗ ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸುವ ಕಟ್ಟುನಿಟ್ಟಿನ ಸಾರಿಗೆ ಸಂಚಾರ ನಿಯಮಗಳನ್ನು ಹೊಂದಿರುವ ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯಿದೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯಿದೆಯನ್ನು ಜನಸಾಮಾನ್ಯರಿಗೆ ಕಿರುಕುಳ ಕೊಡುವ ಅಸ್ತ್ರವನ್ನಾಗಿ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಸ್ತೆ ಸಂಚಾರ ನಿಯಮಾವಳಿಗಳನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಆದರೆ, ನಿಯಮ ಉಲ್ಲಂಘನೆಗೆ ಭಾರೀ ಮೊತ್ತದ ದಂಡ ವಿಧಿಸುವ ಮೂಲಕ ಜನಸಾಮಾನ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ನೂತನ ಕಾಯ್ದೆ ಪ್ರಕಾರ, ಆ್ಯಂಬುಲೆನ್ಸ್ ನಂತಹ ತುರ್ತು ವಾಹನಗಳಿಗೆ ದಾರಿ ಬಿಡದೇ ಇದ್ದರೆ 10,000 ರೂ. ದಂಡ ವಿಧಿಸಲು ಅವಕಾಶವಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ರೂ. 500, ಲೈಸೆನ್ಸ್ ಇಲ್ಲದೆ ಚಾಲನೆ ಮಾಡಿದರೆ ರೂ. 5,000, ವಿಮೆ ಇಲ್ಲದಿದ್ದರೆ ರೂ. 2,000, ವೇಗದ ಚಾಲನೆಗೆ ರೂ. 2,000, ಸೀಟ್ ಬೆಲ್ಟ್ ಇಲ್ಲದಿದ್ದರೆ ರೂ. 1,000, ಹೆಲ್ಮೆಟ್ ರಹಿತ ಚಾಲನೆಗೆ ರೂ. 1,000, ಮದ್ಯಸೇವಿಸಿ ಚಾಲನೆಗೆ ರೂ. 10,000, ದ್ವಿಚಕ್ರವಾಹನದಲ್ಲಿ ಓವರ್ಲೋಡಿಂಗ್ (ಇಬ್ಬರಗಿಂತ ಹೆಚ್ಚು ಮಂದಿ ಪ್ರಯಾಣಿಸಿದರೆ) ಮಾಡಿದರೆ ರೂ. 2,000 ಈ ರೀತಿಯಾಗಿ ದಂಡ ವಿಧಿಸಲಾಗುತ್ತದೆ.