ಬೆಂಗಳೂರು,ಸೆ 09 (Daijiworld News/RD): ರಾಜೀನಾಮೆ ನೀಡಿದ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು, ಭಾರತದಲ್ಲಿರುವ ಬದಲು ಪಾಕಿಸ್ತಾನಕ್ಕೆ ವಲಸೆ ಹೋಗುವುದೇ ಸೂಕ್ತ, ಇಲ್ಲೇ ಇದ್ದು ದೇಶ ಒಡೆಯುವ ಬದಲು, ಪಾಕಿಸ್ತಾನಕ್ಕೆ ಹೋಗಿ ನಮ್ಮ ದೇಶದ ವಿರುದ್ದ ಹೋರಾಟ ಮಾಡಲಿ ಎಂದು ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಟ್ವೀಟ್ ಮಾಡುವ ಮೂಲಕ ಗುಡುಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ’ಈತ ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು! ಇದು ಪ್ರಾಯೋಗಿಕವಾಗಿಯು ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೇ ಇದ್ದು ದೇಶ ಒಡೆಯುವ ಬದಲು, ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ನೇರ ಹೋರಾಟ ಮಾಡುವುದು ಒಳಿತು! ಇದರಲ್ಲಾದರು ನಿಯತ್ತು ತೋರಿಸಲಿ’'ಎಂದು ವ್ಯಂಗ್ಯವಾಡಿದ್ದಾರೆ.
ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ತಮ್ಮ ಹುದ್ದೆಗೆ ಶುಕ್ರವಾರ ದಿಢೀರ್ ರಾಜಿನಾಮೆ ಸಲ್ಲಿಸಿದ್ದರು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕೆಲವು ಒತ್ತಡಗಳಿಂದ ರಾಜಿಯಾಗಿ ಕೆಲಸ ಮಾಡಬೇಕಾದ ಇಂಥಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸೇವೆಯಲ್ಲಿ ನಾನು ಮುಂದುವರಿಯುವುದು ಸಮಂಜಸವಲ್ಲ ಎಂದು ಅನಿಸಿದ್ದರಿಂದ ನಾನು ರಾಜೀನಾಮೆ ನೀಡುತ್ತಿರುವೆ ಎಂದು ಸಸಿಕಾಂತ್ ಸೆಂಥಿಲ್ ಬರೆದುಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಜಿಲ್ಲೆಯಲ್ಲಿ ಸಾಕಷ್ಟು ಪರ ವಿರೋಧ ವ್ಯಕ್ತವಾಗಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜಿಪಿ ಸಂಸದ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.
ತಮಿಳುನಾಡು ಮೂಲದವರಾದ ಸಸಿಕಾಂತ್ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರ್ ಪದವೀಧರರು. ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ದ.ಕ ಜಿಲ್ಲಾಧಿಕಾರಿಗೂ ಮುಂಚೆ ಇವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದರು. 2017ರ ಅಕ್ಟೋಬರ್ ನಿಂದ ಅವರು ದ.ಕ. ಜಿಲ್ಲಾಧಿಕಾರಿಗಳಾಗಿದ್ದರು. ಜಿಲ್ಲೆಯಲ್ಲಿ ಕಳೆದ ವರ್ಷದ ಭೀಕರ ಮಳೆ, ಈ ವರ್ಷದ ಪ್ರವಾಹ, ಅತಿವೃಷ್ಠಿ, ಡೆಂಗ್ಯು, ಮರಳು ಮತ್ತಿತರ ಸಮಸ್ಯೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ನಾನು ಬಾಹ್ಯ ಶಕ್ತಿಗಳಿಗೆ ಮಣಿದು ರಾಜೀನಾಮೆ ನೀಡುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಜನರಲ್ಲಿ ಮತ್ತು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದವರು ತಿಳಿಸಿದ್ದರು.