ಬೆಳಗಾವಿ,ಸೆ 09 (Daijiworld News/RD): ಅತಿ ಹೆಚ್ಚು ಕ್ರೇಜ್ ಹುಟ್ಟು ಹಾಕಿರುವ ಪಬ್ಜಿ ಗೇಮ್ ಆಡಲು ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಳ್ಳಲು ತಂದೆ ಹಣ ಕೊಡದಿದ್ದಕ್ಕೆ ಪಾಪಿ ಮಗನೊಬ್ಬ ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿದ ಅಮಾನವೀಯ ಘಟನೆ ಬೆಳಗಾವಿಯ ಕಾಕತಿಯಲ್ಲಿ ನಡೆದಿದೆ.
ಮೃತ ವ್ಯಕ್ತಿ ಶಂಕ್ರಪ್ಪಾ ಕಮ್ಮಾರ(59) ಆಗಿದ್ದು, ಅವರನ್ನು ರಘುವೀರ್ ಕಮ್ಮಾರ(21) ಕೊಲೆ ಮಾಡಿದ್ದಾನೆ. ಶಂಕ್ರಪ್ಪಾ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಂಕರ ಮೂರು ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದರು.
ಮಗ ನಿರಂತರವಾಗಿ ಪಬ್ಜಿ ಆಟ ಆಡುತ್ತಿದ್ದು, ಆ ಕಾರಣಕ್ಕೆ ತಂದೆ ಹಲವು ಬಾರಿ ಆತನಿಗೆ ಆಡದಂತೆ ಬುದ್ಧಿ ಹೇಳಿದ್ದರು. ಆದರೆ ಮಗ ಮಾತ್ರ ಯಾರ ಮಾತಿಗೂ ಬೆಲೆ ಕೊಡದೆ ಪಬ್ಜಿ ಆಡಿಕೊಂಡು, ಅದರಲ್ಲಿ ಕಾಲ ಕಳೆಯುತ್ತಿದ್ದನು. ಭಾನುವಾರ ರಘುವೀರ್ ನ ಮೊಬೈಲ್ನಲ್ಲಿ ಇಂಟರ್ನೆಟ್ ಪ್ಯಾಕ್ ಖಾಲಿಯಾಗಿತ್ತು. ಆದ್ದರಿಂದ ಪ್ಯಾಕ್ ಹಾಕಿಕೊಳ್ಳಲು ಆತ ತಂದೆ ಬಳಿ ಹಣ ಕೇಳಿದ್ದನು. ಆದರೆ ತಂದೆ ಹಣ ನೀಡಲು ನಿರಾಕರಿಸಿದ್ದಕ್ಕೆ ಮಗ ಸಿಟ್ಟಿಗೊಂಡು, ರಾತ್ರಿ ತಂದೆ ಮಲಗಿದ್ದಾಗ ಮಾರಕಾಸ್ತ್ರಗಳಿಂದ ಕತ್ತು, ಕಾಲು ಕತ್ತರಿಸಿ ಕತ್ತರಿಸಿ ಭೀಕರವಾಗಿ ಕೊಲೆಗೈದಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.